ಜಿಲ್ಲೆ

ಬಯಲುಸೀಮೆ ಆರಾಧ್ಯ ದೇವ ತೇರುಮಲ್ಲೇಶ್ವರ

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕ್ರಿ.ಶ.1446ರಲ್ಲಿ ವೀರ ಕೆಂಚಪ್ಪನಾಯಕ ದ್ರಾವಿಡ ಶೈಲಿಯಲ್ಲಿ ದೇಗುಲ ನಿರ್ಮಿಸಿದ್ದು, ತೇರುಮಲ್ಲೇಶ್ವರ ಸ್ವಾಮಿ ಈ ಭಾಗದ ಆರಾಧ್ಯ ದೈವ. ಸ್ವಾಮಿ ಗರ್ಭಗುಡಿ ದಕ್ಷಿಣ ಮುಖವಾಗಿದ್ದು, ಇದನ್ನು ದಕ್ಷಿಣ ಕಾಶಿ ಎನ್ನಲಾಗುತ್ತದೆ.

ಪೂರ್ವಾಭಿಮುಖವಾದ 60 ಅಡಿ ಎತ್ತರದ ರಾಜಗೋಪುರ, ಗರ್ಭಗುಡಿ ಮುಂಭಾಗದ 30 ಅಡಿ ಎತ್ತರದ ಕಲ್ಲಿನ ದೀಪ ಸ್ತಂಭ ಚಿತ್ತಾಕರ್ಷಕವಾಗಿದೆ. ದೇಗುಲದ ಆವರಣದಲ್ಲಿ ಕಾಳಿಕಾಂಬೆ, ಚಂದ್ರಮೌಳೇಶ್ವರ ಸ್ವಾಮಿ, ಉಮಾಮಹೇಶ್ವರ ದೇವಸ್ಥಾನ, ಗರ್ಭಗುಡಿ ಬದಿ ಪಾರ್ವತಿ ಅಮ್ಮನವರ ದೇವಸ್ಥಾನವಿರುವುದು ಇಲ್ಲಿನ ವಿಶೇಷ.

ಜಾತ್ರೋತ್ಸವ: ಪ್ರತಿ ವರ್ಷ ಮಾಘ ಮಾಸದಲ್ಲಿ ನಡೆಯುವ ಸ್ವಾಮಿಯ ಜಾತ್ರೋತ್ಸವಕ್ಕೆ 350 ವರ್ಷಗಳ ಇತಿಹಾಸವಿದೆ. ಬ್ರಹ್ಮೋತ್ಸವದ ದಿನ ಪ್ರಾತಃ ಕಾಲದಲ್ಲಿ ಮಹಾಭಿಷೇಕದ ತರುವಾಯ ಶಿವಧನಸ್ಸಿಗೆ ಗಂಗಾ ಸ್ನಾನ ಮಾಡಲಾಗುತ್ತದೆ. ಮೂರು ರಥೋತ್ಸವ: ಒಂದೇ ದಿನದಲ್ಲಿ ಮೂರು ರಥೋತ್ಸವಗಳು ಒಂದೆಡೆ ನಡೆಯುವುದು ಇಲ್ಲಿನ ವಿಶೇಷ. ಮಧ್ಯಾಹ್ನ ತೇರಮಲ್ಲೇಶ್ವರ, ಸಂಜೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವ ನೆರವೇರುತ್ತದೆ.

ನಿತ್ಯ ಪೂಜೆ: ಅರ್ಚನೆ, ಅಭಿಷೇಕ, ಎಲೆ ಪೂಜೆ, ಎಳು ನೀರು ಅಭಿಷೇಕ, ಅಷ್ಟೋತ್ತರ, ನಿತ್ಯ ಅಲಂಕಾರ, ಶಿವರಾತ್ರಿ, ಶ್ರಾವಣ ಮತ್ತು ಕಾರ್ತೀಕ ಮಾಸದಲ್ಲಿ ವಿಶೇಷ ಪೂಜಾಕಾರ್ಯ ಹಾಗೂ ಪ್ರತಿ ನಿತ್ಯ ಇತರ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಜನರ ಆರಾಧ್ಯ ದೈವ: ತೇರುಮಲ್ಲೇಶ್ವರ ಸ್ವಾಮಿ ಬಯಲುಸೀಮೆ ಜನರ ಆರಾಧ್ಯ ದೈವ. ಪ್ರತಿ ದಿನ ರಾಜಕಾರಣಿಗಳು, ಅಧಿಕಾರಿಗಳು, ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.

ಕರ್ಪೂರದಾರತಿ: ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ಧಾರ್ಮಿಕ ಕಾರ್ಯ 600 ವರ್ಷಗಳ ಹಿಂದೆ ಹಿರಿಯೂರು ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರರು ತಮ್ಮ ಭಕ್ತಿ ಮತ್ತು ಶೌರ್ಯದ ಪ್ರತೀಕವಾಗಿ ಕರ್ಪೂರದಾರತಿ ಆಚರಣೆಗೆ ತಂದಿದ್ದರು ಎನ್ನಲಾಗಿದೆ. ಉತ್ತಮ ಮಳೆ ಬೆಳೆ ಸಮೃದ್ಧಿಗಾಗಿ ಪ್ರತಿ ವರ್ಷ ಜಾತ್ರೆ ಸಂದರ್ಭ ಶ್ರೀ ಸ್ವಾಮಿಗೆ ಕರ್ಪೂರದ ದೀಪ ಹಚ್ಚಿ ಭಕ್ತಿ ಸಮರ್ಪಿಸುವ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ, ದೀಪದ ಬೆಳಕು ನಾಲ್ಕೈದು ಕಿ.ಮೀ. ಆವರಿಸಿಕೊಳ್ಳುತ್ತದೆ.

ತಲುಪುವುದು ಹೇಗೆ?: ಹಿರಿಯೂರಿನ ಹೃದಯ ಭಾಗದಲ್ಲಿ ದೇವಸ್ಥಾನವಿದೆ. ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ 40 ಕಿ.ಮೀ. ದೂರದಲ್ಲಿದೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 4 ಹಿರಿಯೂರಿನಲ್ಲಿ ಹಾದು ಹೋಗಿದೆ. ಸಮೀಪದಲ್ಲಿ ವೇದಾವತಿ ನದಿ ಹರಿಯತ್ತದೆ. ಸಾರಿಗೆ ವ್ಯವಸ್ಥೆಗೆ ಸಮಸ್ಯೆ ಇಲ್ಲ.

ರಥೋತ್ಸವ 7ರಂದು: ಐತಿಹಾಸಿಕ ಹಿನ್ನೆಲೆ ಹೊಂದಿರುವ ತೇರುಮಲ್ಲೇಶನ ಜಾತ್ರೋತ್ಸವ ಜ.27ರಂದು ಆರಂಭವಾಗಿದ್ದು, ಫೆ.11ರ ವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಫೆ.7ರಂದು ತೇರುಮಲ್ಲೇಶ್ವರ ಸ್ವಾಮಿ, ಚಂದ್ರಮೌಳೇಶ್ವರ, ಉಮಾಮಹೇಶ್ವರ ರಥೋತ್ಸವ, ಫೆ.9ರಂದು ಐತಿಹಾಸಿಕ ಕರ್ಪೂರದಾರತಿ ಧಾರ್ಮಿಕ ಕಾರ್ಯ ನೆರವೇರಲಿದೆ.

ತೇರುಮಲ್ಲೇಶ್ವರ ಸ್ವಾಮಿ ದರ್ಶನಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ದೇಗುಲದ ಬಳಿ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆ.ಪೂರ್ಣಿಮಾ ಶಾಸಕಿ
ಪುರಾತನ ಪ್ರಸಿದ್ಧ ತೇರುಮಲ್ಲೇಶ್ವರ ದೇವಸ್ಥಾನ ಮುಜರಾಯಿ-ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಸದ್ಯ ಬಿ ದರ್ಜೆ ದೇವಸ್ಥಾನವಾಗಿದೆ. ಅಭಿವೃದ್ಧಿ ಕಾರ್ಯದ ಮೂಲಕ ಎ ದರ್ಜೆ ದೇವಸ್ಥಾನವಾಗಿಸಲು ಪ್ರಯತ್ನಿಸಲಾಗುವುದು, ಭಕ್ತರಿಗೆ ಶಿವಧನಸ್ಸು ದರ್ಶನಕ್ಕೆ ಅವಕಾಶ ಕಲ್ಪಿಸಲು 14 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪ್ರಶಾಂತ್ ಪಾಟೀಲ್, ತಹಸೀಲ್ದಾರ್, ಹಿರಿಯೂರು.