ಜಿಲ್ಲೆ

ಟ್ರಾೃಕ್ಟರ್-ಬುಲೆರೋ ಅಪಘಾತದಲ್ಲಿ ಮೂವರು ಸಾವು

Chitradurga

ಹಿರಿಯೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಟ್ರಾೃಕ್ಟರ್ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕೆ.ಆರ್.ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಅಪಘಾತಕ್ಕಿಡಾಗಿ ಮೂವರು ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ.

ಜೇವರ್ಗಿ, ಕಲುಬರಗಿ ಜಿಲ್ಲೆಯ ಮೌನೇಶ್, ಸಕ್ಕಪ್ಪ, ಮಹದೇವಪ್ಪ ಮೃತರು. ಗಾಯಗೊಂಡ ಮಾರುತಿ, ಪರಶುರಾಮ್, ಯಲ್ಲಪ್ಪ, ಸಾಕಮ್ಮ, ಭೀಮಪ್ಪ, ಬಸಮ್ಮ, ಹನುಮಂತಪ್ಪ, ಚನ್ನಪ್ಪ, ಅರುಣ್‌ಕುಮಾರ್, ಹನುಮಂತಿ, ಅನಸೂಯಮ್ಮ, ದುರ್ಗಮ್ಮ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಮಿಕರಿದ್ದ ಟ್ರಾಕ್ಟರ್ ಹಾಗೂ ಬುಲೇರೊ ವಾಹನದ ನಡುವೆ ಅಪಘಾತ ಸಂಭವಿಸಿದೆ. ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾಗ ಅವಘಡವಾಗಿದೆ. ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಟ್ರಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕಟ್ಟಡ ಕೂಲಿ ಕಾರ್ಮಿಕರಾಗಿದ್ದು ಕಳೆದ ಎಂಟು ತಿಂಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.

ಗ್ರಾಮಸ್ಥರ ನೆರವು: ಘಟನೆ ಸುದ್ದಿ ತಿಳಿದ ತಕ್ಷಣ ಕೆ.ಆರ್.ಹಳ್ಳಿ ಗ್ರಾಮಸ್ಥರು ಗಾಯಾಳುಗಳನ್ನು ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಸಣ್ಣಪುಟ್ಟ ಗಾಯಗೊಂಡಿದ್ದವರಿಗೆ ಊಟದ ವ್ಯವಸ್ಥೆ ಜತೆಗೆ ತಮ್ಮ ಊರುಗಳಿಗೆ ತೆರಳಲು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿದರು.
ಸಮಾಜ ಸೇವಕರಾದ ಚಿಂಟು ಮುಭಾರಕ್, ಕೇಶವಮೂರ್ತಿ, ಕಬಡ್ಡಿ ರವಿ, ಶಿವಕುಮಾರ್ ಇತರರು ನೆರವು ನೀಡಿ ಮಾನವೀಯತೆ ಮೆರೆದರು.