ಜಿಲ್ಲೆ

ವರ್ಷ ಕಳೆದರೂ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ; ಹಿರಿಯೂರಿನಲ್ಲಿ ನಗರಸಭೆ ಕಾರ್ಯಾರಂಭಕ್ಕೆ ಮೀನ-ಮೇಷ

ಹಿರಿಯೂರು: ಇಲ್ಲಿನ ನಗರಸಭೆ ಕಟ್ಟಡ ನಿರ್ಮಾಣ ಪೂರ್ಣಗೊಂಡು ಒಂದು ವರ್ಷವೇ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ !

ನಗರಸಭೆ ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಶಾಖೆಗಳು ಪಕ್ಕದ ಲೋಕೋಪಯೋಗಿ ಇಲಾಖೆ ಕಟ್ಟಡ ಆಶ್ರಯಿಸಿದ್ದು, ಆಡಳಿತ-ವಿರೋಧ ಪಕ್ಷದ ರಾಜಕೀಯ ಪ್ರತಿಷ್ಠೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಸ ಕಟ್ಟಡ ಪ್ರವೇಶಿಸಲು ಕಾಲ ಕೂಡಿ ಬಂದಿಲ್ಲ.

ನಗರಸಭೆಯಲ್ಲಿ ವಿವಿಧ ಸೇವೆ ಪಡೆಯಲು ಬರುವ ಸಾರ್ವಜನಿಕರಿಗೆ ಸಕಾಲಕ್ಕೆ ಅಧಿಕಾರಿಗಳು ಲಭ್ಯವಾಗುತ್ತಿಲ್ಲ, ಸೇವೆಯೂ ದೊರೆಯುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ವಿಶೇಷ ಅನುದಾನ: ಪೀಠೋಪಕರಣ, ಲಿಫ್ಟ್ ಅಳವಡಿಸಲು ಶಾಸಕರ ನಿಧಿಯಿಂದ 1.50 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ತಾಂತ್ರಿಕ ಒಪ್ಪಿಗೆ ಪಡೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಕಡತ ಸಿದ್ಧಪಡಿಸಲಾಗಿದೆ.

ಹಿರಿಯೂರಿನ ಜನಸಂಖ್ಯೆ 70,000 ದಾಟಿದ್ದು, ಹೊಸ ಬಡಾವಣೆ, ಕೈಗಾರಿಕೆ ಅಭಿವೃದ್ಧಿ, ವಾಣಿಜ್ಯ-ವ್ಯಾಪಾರ ವಹಿವಾಟು ಹೆಚ್ಚಿದ್ದು, ನಗರಸಭೆಯಲ್ಲಿ ವಿವಿಧ ಸೇವೆ ಪಡೆಯಲು ನಿತ್ಯ ನೂರಾರು ಜನ ಭೇಟಿ ನೀಡುತ್ತಿದ್ದಾರೆ. ಪಾರದರ್ಶಕ ಆಡಳಿತ, ತ್ವರಿತ ಸೇವೆ, ಜನ ಸ್ನೇಹಿ ಆಡಳಿತಕ್ಕೆ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕಾಗಿದೆ.

ಹಿರಿಯೂರು ತಾಲೂಕಿನಲ್ಲಿ ನಗರಸಭೆ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದಿದೆ. ಈಗಾಗಲೇ ಕಟ್ಟಡವನ್ನು ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ಆದರೂ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ನಾರಾಯಣ ರೆಡ್ಡಿ, ಗುತ್ತಿಗೆದಾರ
ಹಿರಿಯೂರು ನಗರಸಭೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಚೇರಿ ಪೀಠೋಪಕರಣ ಅಳವಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಶೀಘ್ರ ಟೆಂಡರ್ ಕಡತಕ್ಕೆ ಡಿಸಿ ಒಪ್ಪಿಗೆ ಪಡೆಯಲಾಗುವುದು. ಶ್ರೀನಿವಾಸ್ ಮೂರ್ತಿ, ಎಇಇ ನಗರಸಭೆ
ನಗರಸಭೆ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆಗೆ ಮೀನ-ಮೇಷ ಎಣಿಸಲಾಗುತ್ತಿದೆ. ಅನಗತ್ಯವಾಗಿ ವಿಳಂಬ ಮಾಡಿದರೆ ರೈತ ಸಂಘ, ವಿವಿಧ ಪ್ರಗತಿಪರ ಸಂಘಟನೆಗಳ ಜತೆಗೂಡಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಕೆ.ಸಿ.ಹೊರಕೇರಪ್ಪ, ಕಾರ್ಯಾಧ್ಯಕ್ಷ ಜಿಲ್ಲಾ ರೈತ ಸಂಘ