ಜಿಲ್ಲೆ

ಕಮಿಷನ್ ಹಾವಳಿಗೆ ಅನ್ನದಾತರ ಆಕ್ರೋಶ

Chitradurga

ಹಿರಿಯೂರು: ಕಮಿಷನ್ ಹಾವಳಿ ತಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ಎಪಿಎಂಸಿ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ದವಸ-ಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ವರ್ತಕರ್ತರು ನಿತ್ಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕು. ಕಮೀಷನ್ ಹಾವಳಿ, ಭ್ರಷ್ಟಾಚಾರ, ಮೂಲ ಸೌಲಭ್ಯ ಕೊರತೆ, ಕಳಪೆ ಕಾಮಗಾರಿ, ಅನ್ನದಾತರ ಶೋಷಣೆಗೆ ಕಡಿವಾಣ ಹಾಕಿ ರೈತರ ಹಿತ ಕಾಪಾಡಬೇಕು ಎಂದು ಪಟ್ಟು ಹಿಡಿದರು.

ನಗರದ ವ್ಯಾಪ್ತಿಯಲ್ಲಿ ಫುಟ್‌ಪಾತ್ ಮೇಲೆ ಖಾಸಗಿ ವರ್ತಕರು ರೈತರ ಉತ್ಪನ್ನ ಕೊಳ್ಳಲು ಮಿನಿ ಮಾರುಕಟ್ಟೆ ತೆರೆದು ಅಗ್ಗದ ಬೆಲೆಗೆ ಉತ್ಪನ್ನ ಖರೀದಿಸಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳು-ಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ದೂರಿದರು.

ಎಪಿಎಂಸಿ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಮಾರುಕಟ್ಟೆ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.

ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ. ಬಬ್ಬೂರು ಗ್ರಾಪಂ ಸದಸ್ಯ ಹೇಮಂತ್ ಕುಮಾರ್, ರೈತ ಮುಖಂಡರಾದ ಸಿದ್ದರಾಮಣ್ಣ, ಕಲ್ಪನಾ, ಶಿವಕುಮಾರ್, ದಸ್ತಗೀರ್‌ಸಾಬ್, ತಿಮ್ಮಾರೆಡ್ಡಿ, ಗೀತಮ್ಮ ಇತರರಿದ್ದರು.

ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಹೇಳಿಕೆ: ಶಿರಾ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ರೈತರು ನೇರವಾಗಿ ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ನಮ್ಮಲ್ಲಿ ಏಕೆ ಇಂತಹ ವ್ಯವಸ್ಥೆ ಇಲ್ಲ.

ಎಪಿಎಂಸಿ ಅಧ್ಯಕ್ಷ ಜಗನ್ನಾಥ್ ಹೇಳಿಕೆ: ಎಪಿಎಂಸಿ ಮಾರುಟ್ಟಕೆಗೆ ಬರುವ ಅನ್ನದಾತರ ಹಿತ ಕಾಯಲು ಬದ್ಧವಾಗಿದ್ದು, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ನಗರದ ವ್ಯಾಪ್ತಿಯಲ್ಲಿನ ಖಾಸಗಿ ಮಿನಿ ಮಾರುಕಟ್ಟೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು.