ಹಿರಿಯೂರು: ಕೇಂದ್ರದ ಅಟಲ್ ಭೂಜಲ ಯೋಜನೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಜಲ ಮೂಲ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.
ತಾಲೂಕಿನ ರಂಗೇನಹಳ್ಳಿ ಕೆರೆ ಅಭಿವೃದ್ಧಿ-ಬ್ಯಾಡರಹಳ್ಳಿ, ಸಾಲುಣಸೆ ವೇದಾವತಿ ನದಿ ಪಾತ್ರದಲ್ಲಿ 14.50 ಕೋಟಿ ರೂ. ವೆಚ್ಚದ ಸರಣಿ ಚೆಕ್ ಡ್ಯಾಂ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸತತ ಬರದಿಂದ ಹನಿ ನೀರಿಗೂ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಂಡು ಜಿಲ್ಲೆಯ ಜನರ ನೀರಿನ ಬವಣೆ ದೂರಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಸರಣಿ ಚೆಕ್ ಡ್ಯಾಂ: ವೇದಾವತಿ ನದಿ ಪಾತ್ರದಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿದೆ. ಬ್ಯಾಡರಹಳ್ಳಿ, ತೊರೆ ಓಬೇನಹಳ್ಳಿ ಹಾಗೂ ಸಾಲುಣಸೆ ಬಳಿ. ಕೋಟಿ ರೂ. ವೆಚ್ಚದಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣದಿಂದ ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದ ನದಿ ನೀರನ್ನು ಸಂರಕ್ಷಣೆ ಮಾಡಲಾಗುವುದು. ಇದರಿಂದ ಜನ-ಜಾನುವಾರುಗಳ ಕುಡಿವ ನೀರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಲಿದೆ ಎಂದು ಹೇಳಿದರು.
ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಪಂ ಸದಸ್ಯ ಕೆ.ಶಂಕರಮೂರ್ತಿ, ಗ್ರಾಮಸ್ಥರಾದ ಶಿವಣ್ಣ, ಮಹಾಲಿಂಗಪ್ಪ, ಶ್ರೀನಿವಾಸ್, ರಾಘವೇಂದ್ರ, ರಂಗಸ್ವಾಮಿ, ನಾಗರಾಜ್, ರಘು, ಹರೀಶ್, ವೀರೇಂದ್ರ, ನಿರಂಜನ್ ಇತರರಿದ್ದರು.