ಉಡುಪಿ: ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಮಾಣೈಯಲ್ಲಿ ರೈತ ಸುರೇಶ್ ನಾಯಕ್ ಈ ಬಾರಿಯ ಮಳೆಗೆ ಎರಡು ಬಾರಿ ಬೆಳೆ ನಾಶವಾದರೂ ಛಲ ಬಿಡದೆ 1 ಎಕರೆ ಪ್ರದೇಶದಲ್ಲಿ ಹೈಬ್ರೀಡ್ ಕೆಂಪು ಹರಿವೆ ಸೊಪ್ಪು ಬೆಳೆದು ಗಮನ ಸೆಳೆದಿದ್ದಾರೆ.
ಕೇರಳದ ತೋಟಗಾರಿಕಾ ಇಲಾಖೆಯಿಂದ 18 ಸಾವಿರ ರೂ. ವೆಚ್ಚದಲ್ಲಿ 6 ಕೆಜಿ ರೆಡ್ ಅಮರಂತ್ ಬೀಜಗಳನ್ನು ತರಿಸಿದ್ದು, ಜತೆಗೆ ಸ್ಥಳೀಯವಾಗಿ 4 ಕೆಜಿ ಇಂಡೋ-ಅಮೆರಿಕನ್ ಹೈಬ್ರೀಡ್ ಬೀಜಗಳನ್ನು ಪಡೆದಿದ್ದಾರೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಿಂದ ತಾಂತ್ರಿಕ ಸಹಾಯ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಹರಿವೆ ಬೀಜ ಬಿತ್ತನೆ ಮಾಡಿ 40ರಿಂದ 45 ದಿನದಲ್ಲಿ ಬೆಳೆ ಕಟಾವಿಗೆ ಬರುತ್ತಿದೆ. ಉತ್ತಮ ಇಳುವರಿ ಬಂದಿದ್ದು, ಈಗಾಗಲೇ 25 ಸೆಂಟ್ಸ್ ಜಾಗದಲ್ಲಿ ಬೆಳೆದ ಬೆಳೆಗಳನ್ನು ಕಟಾವು ಮಾಡಿ ಮಾರಾಟ ಮಾಡಿದ್ದಾರೆ. ಹರಿವೆಗೆ ಕೆಜಿಗೆ 50 ರೂ. ಮಾರುಕಟ್ಟೆ ದರ ಲಭಿಸುತ್ತಿದೆ. ಕೃಷಿಗೆ 40 ಸಾವಿರ ರೂ. ಖರ್ಚು ಮಾಡಿದ್ದು, 1 ಲಕ್ಷ ರೂ. ವರೆಗೆ ಆದಾಯ ನಿರೀಕ್ಷೆ ಇದೆ.
25 ವರ್ಷದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸುರೇಶ್ ನಾಯಕ್ ಈ ಬಾರಿ 13 ಎಕರೆ ಹಡಿಲು ಭೂಮಿ ಲೀಸ್‌ಗೆ ಪಡೆದು ಭತ್ತ ಬೆಳೆದಿದ್ದಾರೆ. ಕಲ್ಲಂಗಡಿ ಬೆಳೆಗಾಗಿ 30 ಎಕರೆ ಗದ್ದೆಯನ್ನು ಲೀಸ್‌ಗೆ ಪಡೆದಿದ್ದಾರೆ.
ಬಿಳಿತುಕ್ಕು ರೋಗ ಬರಲ್ಲ: ಸ್ಥಳೀಯ ಹರಿವೆ ಸೊಪ್ಪುಗಳಲ್ಲಿ ಹೆಚ್ಚಾಗಿ ಬಿಳಿ ತುಕ್ಕು ರೋಗ ಕಾಣಿಸಿಕೊಂಡು ಬೆಳೆ ಹಾನಿಯಾಗುವುದು ಸಾಮಾನ್ಯ. ಆದರೆ ಕೆಂಪು ಅಂಶ ಹೇರಳವಾಗಿರುವ ಹೈಬ್ರೀಡ್ ಹರಿವೆ ಸೊಪ್ಪಿನಲ್ಲಿ ಈ ರೋಗ ಕಾಣಿಕೊಳ್ಳುವುದಿಲ್ಲ. ಇದರಿಂದ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಬೀಜ ಬಿತ್ತನೆ ಬಳಿಕ ಕೋಳಿ ಗೊಬ್ಬರ, ಎಕರೆಗೆ 20 ಟನ್ ಹಟ್ಟಿಗೊಬ್ಬರ, ಸುಫಲಾ ಹಾಕಬೇಕು. ಗಿಡ ಬೆಳೆಯುತ್ತಿರುವಾಗ ಬೇವಿನ ಎಣ್ಣೆ ಸಿಂಪಡಿಸಿದರೆ ಸಾಕಾಗುತ್ತದೆ. ಹೀಗೆ ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಮಾಡಬಹುದು ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಚೈತನ್ಯ.
ಈ ವರ್ಷ ಸುರಿದ ಭಾರಿ ಮಳೆಗೆ 2 ಬಾರಿ ಹರಿವೆ ಬೀಜ ಬಿತ್ತನೆ ಮಾಡಿರುವುದು ಕೊಚ್ಚಿಕೊಂಡು ಹೋಗಿದೆ. 70 ಸೆಂಟ್ಸ್‌ನಲ್ಲಿ ಬಿತ್ತಿದ ಬೆಳೆ ನಷ್ಟವಾಗಿದೆ. ನಂತರ 1 ಎಕರೆಯಲ್ಲಿ ಉತ್ತಮ ಇಳುವರಿ ಬಂದಿದೆ. ಹರಿವೆ ಸೊಪ್ಪಿಗೆ ಈಗ ಉತ್ತಮ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ಆದಾಯ ನಿರೀಕ್ಷೆ ಇದೆ.
- ಸುರೇಶ್ ನಾಯಕ್, ಪ್ರಗತಿಪರ ಕೃಷಿಕ, ಹಿರಿಯಡ್ಕ