ಜಿಲ್ಲೆ

ಮಕ್ಕಳ ಸಾಧನೆಯಿಂದ ಪಾಲಕರಿಗೆ ಕೀರ್ತಿ

ಎ. ಆರ್. ರಘುರಾಮ

ಹಿರೀಸಾವೆ :ಮಕ್ಕಳ ಸಾಧನೆಯು ಪಾಲಕರಿಗೆ ಕೀರ್ತಿ ಮತ್ತು ನೆಮ್ಮದಿ ತಂದುಕೊಡುತ್ತದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿ ಪ್ರೌಢಶಾಲೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸರಸ್ವತಿ ಪೂಜೆ, ಗುರುವಂದನೆ, ಮಾತೃ-ಪಿತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಮಗೆ ಅದೆಷ್ಟೇ ಕಷ್ಟಗಳಿದ್ದರೂ ತಂದೆ-ತಾಯಂದಿರು ಮಾತ್ರ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಲು ಪರಿಶ್ರಮ ಪಟ್ಟಿರುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಅದರಂತೆಯೇ ಶಿಕ್ಷಕರೂ ಶ್ರಮ ವಹಿಸುವುದನ್ನು ವಿದ್ಯಾರ್ಥಿಗಳು ಅರಿತು ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಬಯಸುವ ಕ್ಷೇತ್ರದಲ್ಲಿಯೇ ಸಾಧನೆ ಮಾಡಲು ಅವಕಾಶ ಮಾಡಿಕೊಡುವುದು ಅಗತ್ಯವಿದೆ. ಒತ್ತಡದಿಂದ ಯಾವುದನ್ನು ನೀಡಿದರೂ ಸಹ ಆ ಹಾದಿಯಲ್ಲಿ ಸಾಗಿ ಸಾಧನೆಯ ಗುರಿ ತಲುಪುವ ಸಾಧ್ಯತೆ ಕಡಿಮೆ ಇರಲಿದೆ. ಆದ್ದರಿಂದ ಮಕ್ಕಳ ಮನಸ್ಸನ್ನು ಮೊದಲು ಓದಿ ನಂತರ ಅದಕ್ಕನುಗುಣವಾಗಿ ಅವಕಾಶ ನೀಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಂದೆ-ತಾಯಿಯರಿಗೆ ಪಾದ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು. ಪಾಲಕರು ಶ್ರೀಗಳಿಗೆ ಪಾದ ಪೂಜೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಉದ್ಯಮಿ ಸೋಮಶೇಖರ್, ದಿಡಗ ಗ್ರಾಪಂ ಮಾಜಿ ಅಧ್ಯಕ್ಷ ರತ್ನರಾಜ್, ಮುಖ್ಯ ಶಿಕ್ಷಕ ಟಿ.ತಿಮ್ಮೇಗೌಡ ಇತರರು ಇದ್ದರು.