ಹಿರೀಸಾವೆ : ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಹೋಬಳಿಯ ನರಿಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಂಸದರು ಹಾಗೂ ಶಾಸಕರ ನಿಧಿಯಿಂದ ಮೊದಲ ಹಂತದಲ್ಲಿ ಲಭ್ಯವಿರುವ 9 ಲಕ್ಷ ರೂ. ಅನುದಾನದಲ್ಲಿ ಭವನದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಹೆಚ್ಚಿನ ಅನುದಾನ ಕಲ್ಪಿಸಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದರು. ಗ್ರಾಮದ ಕೆರೆಂಗಳದಲ್ಲಿರುವ ಈಶ್ವರ ದೇಗುಲದ ಅಭಿವೃದ್ಧಿಗೆ ಜೂನ್‌ನಲ್ಲಿ 3ಲಕ್ಷ ರೂ. ಅನುದಾನ ಕಲ್ಪಿಸಲಾಗುವುದು. ಅಲ್ಲದೆ ಊರಿನ ಹುಣಸೇಮರದ ಬಳಿಯಿಂದ ಗೇಟ್ ವರೆಗೂ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಕಿರಿಯ ಸಹಾಯಕ ಇಂಜಿನಿಯರ್ ಬಿ.ಮಂಜುನಾಥ್, ತಾಪಂ ಮಾಜಿ ಸದಸ್ಯರಾದ ತುಮಕೂರು ಪುಟ್ಟರಾಜು, ಎಂ.ಆರ್.ವಾಸು, ದಿಡಗ ಗ್ರಾಪಂ ಸದಸ್ಯೆ ಎನ್.ಎಲ್.ಅನಿತಾ, ಮಾಜಿ ಸದಸ್ಯ ತೋಟಿ ನಾಗರಾಜ್, ಮುಖಂಡರಾದ ತಾತೇಗೌಡ ಹಾಗೂ ಗ್ರಾಮಸ್ಥರು ಇದ್ದರು.