ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ದೇವಿಯ ಹಬ್ಬ ನಡೆಯುತ್ತಿದ್ದು ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳು ನೆರವೇರುತಿದ್ದವು. ಜತೆಗೆ ಪ್ರತಿ ದಿನ ರಾತ್ರಿ ಜರುಗುತಿದ್ದ ರಂಗದ ಕುಣಿತ ನೋಡುಗರ ಗಮನ ಸೆಳೆಯುವಂತಿತ್ತು. ಬುಧವಾರ ದೇವಿಯ ಬ್ರಹ್ಮ ರಥೋತ್ಸವದ ಹಿನ್ನೆಲೆ ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ಭಕ್ತರು ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು.ಬೆಳಗ್ಗೆ ಉಯ್ಯಾಲೆ ಬೀದಿಯಲ್ಲಿ ರಥವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಯಿತು. ಜತೆಗೆ ದೇವಿಯ ಉತ್ಸವ ಮೂರ್ತಿಯನ್ನು ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಯಿತು. ಮಧ್ಯಾಹ್ನ ಸುಮಾರನಲ್ಲಿ ಸನ್ನಿಧಿಯಿಂದ ಮೂಲ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಶ್ರೀ ಚೌಡೇಶ್ವರಿ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಪ್ರಮುಖ ಬೀದಿಯಲ್ಲಿ ಸಾಗಿತು. ಭಕ್ತರು ಈಡುಕಾಯಿ ಒಡೆದು ಭಕ್ತಿ ಭಾವದಲ್ಲಿ ತೇಲಿದರು.
ಹೆಣ್ಣು ಮಕ್ಕಳು ಬಾಯಿ ಬೀಗ ಚುಚ್ಚಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ಹರಕೆ ತೀರಿಸಿದರು. ಉತ್ಸವದೊಂದಿಗೆ ಉಯ್ಯಾಲೆ ಬೀದಿಗೆ ಕರೆತಂದು ಸಿಂಗರಿಸಿದ್ದ ರಥದ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ದೇವಿಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ಹಗ್ಗ ಹಿಡಿದು ರಥವನ್ನು ಎಳೆದರು. ಹೆಣ್ಣು ಮಕ್ಕಳು ಬಾಳೆ ಹಣ್ಣು, ಹೂವು ಹಾಗೂ ದವನವನ್ನು ರಥದ ಮೇಲೆ ಎಸೆದು ಜಯಘೋಷ ಕೂಗಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಮಲ ಉದಯಕುಮಾರ್, ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಾಮೇಗೌಡ, ಮಾಜಿ ಅಧ್ಯಕ್ಷರಾದ ಹೆಚ್.ಜೆ.ಮಹೇಶ್, ಹೆಚ್.ಈ.ಬೋರಣ್ಣ, ಪ್ರಮುಖರಾದ ರಾಮೇಗೌಡ, ಉದಯಕುಮಾರ್, ಪ್ರಮೊದ್, ಮಂಜು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.