ಹಿರಿಸಾವೆ: ಕೊತ್ತನಹಳ್ಳಿ ಹಾಗೂ ತೂಬಿನಕೆರೆ ಮಧ್ಯಭಾಗದಲ್ಲಿ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅನುದಾನ ಕಲ್ಪಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಕೊತ್ತನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮೀಣ ಭಾಗ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.
ಹಿರೀಸಾವೆ ಸಮೀಪ ನಾಲೆಯ ಏರಿಯನ್ನು ವಿಸ್ತರಣೆ ಮಾಡಲು ಎರಡು ಕೋಟಿ ರೂ. ಮಂಜೂರು ಮಾಡಲಾಗಿದ್ದು, ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಹಿರೀಸಾವೆಯಿಂದ ಗಡಿಭಾಗದ ಗ್ರಾಮಗಳು ಸೇರಿದಂತೆ ಪಕ್ಕದ ತಾಲೂಕು ಕೇಂದ್ರ ನಾಗಮಂಗಲ ಹಾಗೂ ಕೆ.ಆರ್.ಪೇಟೆ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಹುತೇಕ ಅಭಿವೃದ್ಧಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನಗಳ ಲಭ್ಯತೆಯ ಮೇಲೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ಮತಿಘಟ್ಟ ಸೊಸೈಟಿ ಮಾಜಿ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ಎಚ್.ಬಿ. ಲೋಕೇಶ್, ಕೊತ್ತನಹಳ್ಳಿ ಮಂಜೇಗೌಡ ಅಣ್ಣಯ್ಯ ಇತರರು ಇದ್ದರು.