ಜಿಲ್ಲೆ

ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿರೇಪೇಟೆ ಗಣೇಶ ಮಂಡಳಿ

ಹುಬ್ಬಳ್ಳಿ : ಇಲ್ಲಿನ ಹಿರೇಪೇಟೆ, ಭೂಸಪೇಟೆ ಹಾಗೂ ಕಂಚಗಾರ ಓಣಿಯ ಗಣೇಶೋತ್ಸವ ಮಂಡಳಿಗೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮವಾಗಿರುವುದರಿಂದ ಸೆ. 18 ರಿಂದ 28ರವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗುಪ್ಪಿ, 18ರಂದು ಸಂಜೆ 4 ಗಂಟೆಗೆ ಮೂರುಸಾವಿರ ಮಠದಿಂದ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು, ರಾತ್ರಿ 8 ಗಂಟೆಗೆ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದರು.

19ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಗುವುದು. ಯುವ ಬ್ರಿಗೆಡ್​ನ ರಾಜ್ಯ ಪ್ರಕಲ್ಪ ಪ್ರಮುಖ ಕಿರಣ ರಾಮ್ ಅತಿಥಿಯಾಗಿದ್ದು, ಸಮಿತಿ ಗೌರವ ಅಧ್ಯಕ್ಷ ವಿಜಯ ಶೆಟ್ಟರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಹಿರಿಯ ವರ್ತಕ ಜಿ.ಎಂ. ಚಿಕ್ಕಮಠ, ಮೋಹನ ಸವಣೂರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ ಹಾಗೂ ಇನ್ನಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

20ರಂದು ಸಂಜೆ 6 ಗಂಟೆಗೆ ಏರ್ಪಡಿಸಿರುವ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರು ಪಾಲ್ಗೊಳ್ಳುವರು. 22ರಂದು ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ, 23ರಂದು ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

23ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಫಕ್ಕಿರೇಶ್ವರ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಾಲ್ಗೊಳ್ಳಲಿದ್ದು, 24 ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸುವರು. ಅಂದು ರಾತ್ರಿ 8 ಗಂಟೆಗೆ ಯಶವಂತ ಸರದೇಶಪಾಂಡೆ ಅವರ ರಾಶಿಚಕ್ರ ಏಕವ್ಯಕ್ತಿ ರಂಗಪ್ರಯೋಗ ನಡೆಯಲಿದೆ ಎಂದು ತಿಳಿಸಿದರು.

25ರಂದು ಪದ್ಮಶ್ರೀ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಗುವುದು. 27ರಂದು ಪೊಲೀಸ್, ಪೌರ ಕಾರ್ವಿುಕರು ಹಾಗೂ ಹೆಸ್ಕಾಂ ನೌಕರರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಮಿತಿ ಗೌರವ ಕಾರ್ಯದರ್ಶಿ ಅಭಿನಂದನ ಟೀಕಣ್ಣವರ, ಪ್ರೇಮನಾಥ ಕಠಾರೆ, ಅಪ್ಪಣ್ಣ ಬೆಂಡಿಗೇರಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.