ಹಿರೇಕೆರೂರ: ಪಟ್ಟಣದ ತಾಲೂಕು ಪಂಚಾಯಿತಿಗೆ ಸಂಬಂಧಿಸಿದ 19 ವಾಣಿಜ್ಯ ಮಳಿಗೆಗಳಿದ್ದು, ಈಗಿನ ಮಾರುಕಟ್ಟೆಯ ದರದಂತೆ ಬಾಡಿಗೆ ನಿಗದಿಯಾಗಿಲ್ಲ. ಮೂಲ ಮಾಲೀಕರು ಮಳಿಗೆ ನಡೆಸುತ್ತಿಲ್ಲ. ಇಲ್ಲಿಯವರೆಗೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ತಾಪಂ ಕಚೇರಿಯ ಎದುರು 12 ಹಾಗೂ ಪಶು ಆಸ್ಪತ್ರೆಯ ಎದುರು 7 ಅಂಗಡಿಗಳಿವೆ. 2001ರಲ್ಲಿ ಇವುಗಳನ್ನು ಹರಾಜು ಮಾಡಿ ಕರಾರಿನಂತೆ ಬಾಡಿಗೆ ನಿಗದಿಪಡಿಸಿ ವ್ಯಾಪಾರ ವಹಿವಾಟಿನ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಮರು ಹರಾಜು ಪ್ರಕ್ರಿಯೆ ನಡೆದಿಲ್ಲ ಎನ್ನಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಬಾಡಿಗೆ ಪಡೆದಿರುತ್ತಾರೆಯೋ ಅದೆ ಉದ್ದೇಶಕ್ಕೆ ಅಂಗಡಿ ನಡೆಸಬೇಕಾಗಿದೆ ಹಾಗೂ ಮಳಿಗೆಗಳಲ್ಲಿ ಯಾವುದೇ ಮಾರ್ಪಾಟು, ಮಳಿಗೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಹೀಗೆ ಹಲವು ನಿಯಮ ವಿಧಿಸಿ ಬಾಡಿಗೆಗೆ ನೀಡಲಾಗಿದೆ. ಆದರೆ, ಇಲ್ಲಿ ಕೆಲ ಅಂಗಡಿಗಳ ಮಾಲೀಕರು ಈ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಆಗಿನ ಆಡಳಿತ ಮಂಡಳಿಯವರು ಸಭೆಯಲ್ಲಿ ಚರ್ಚಿಸಿ ಠರಾವು ಪಾಸ್ ಮಾಡಿ ಮೂರು ವರ್ಷಕ್ಕೊಮ್ಮೆ ಬಾಡಿಗೆ ಹೆಚ್ಚಿಸುತ್ತ ಬಂದಿದ್ದರು. ಕೊನೆಯದಾಗಿ 2021ರ ಏಪ್ರಿಲ್‌ನಲ್ಲಿ ಸಾಮಾನ್ಯ ಸಭೆಯಲ್ಲಿ ಮುಂದಿನ 3 ವರ್ಷದ ಅವಧಿಗೆ ಬಾಡಿಗೆ ಹೆಚ್ಚಿಗೆ ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ತಾಪಂ ಕಚೇರಿ ಎದುರಿನ ಮಳಿಗೆಗಳಲ್ಲಿ 1ರಿಂದ 8ನೇ ಸಂಖ್ಯೆಯ ಪ್ರತಿ ಮಳಿಗೆಗೆ 3 ಸಾವಿರ ರೂ., 9 ರಿಂದ 12ರವರೆಗೆ 5 ಸಾವಿರ ರೂ., 13ನೇ ಮಳಿಗೆಗೆ 10 ಸಾವಿರ ರೂ. ಹಾಗೂ ಪಶು ಆಸ್ಪತ್ರೆಯ ಎದುರಿಗಿನ ಮಳಿಗೆಗಳಿಗೆ 1 ರಿಂದ 7 ಸಂಖ್ಯೆಯವರೆಗೆ 4 ಸಾವಿರ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 10, 11, 13 ಸಂಖ್ಯೆಗಳ ಮಾಲೀಕರು ಕೋವಿಡ್ ನೆಪ ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿ ಹೆಚ್ಚಿನ ಬಾಡಿಗೆಗೆ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲ ಅಂಗಡಿಗಳ ಮಾಲೀಕರು ಪ್ರತಿ ತಿಂಗಳು ಬಾಡಿಗೆ ಪಾವತಿಸಿದರೆ, ಕೆಲವರು 6 ತಿಂಗಳು ಹಾಗೂ ವರ್ಷದಿಂದ ಬಾಕಿ ಉಳಿಸಿಕೊಂಡಿದ್ದಾರೆ. ಕೆಲವು ಪ್ರಭಾವಿಗಳು ಕಡಿಮೆ ಹಣಕ್ಕೆ ಬಾಡಿಗೆ ಪಡೆದು ಅದನ್ನು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡಿದ್ದಾರೆ ಎಂಬ ಆರೋಪಗಳಿವೆ.
ಕಾನೂನು ಪ್ರಕಾರ, ಪ್ರತಿ 3 ಅಥವಾ 5 ವರ್ಷಕ್ಕೊಮ್ಮೆ ಹರಾಜು ಪ್ರಕ್ರಿಯೆ ನಡೆಸಬೇಕು. ಒಂದು ವೇಳೆ ಮೂಲ ಮಾಲೀಕರು ಬಾಡಿಗೆ ಹೆಚ್ಚಿಗೆ ಮಾಡಿಕೊಂಡು ಮುಂದುವರಿಯಲು ಅವಕಾಶವಿದೆ ಎಂಬುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 2021ರಿಂದ ತಾಪಂ ಆಡಳಿತ ಮಂಡಳಿ ಇಲ್ಲದಿರುವ ಕಾರಣಕ್ಕೊ? ಅಥವಾ ಅಧಿಕಾರಿಗಳ ನಿರ್ಲಕ್ಷವೋ ಒಟ್ಟಾರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ನಾನು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಲೋಪದೋಷ ಕಂಡು ಬಂದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಕೆ.ಎಂ. ಮಲ್ಲಿಕಾರ್ಜುನ, ತಾಪಂ ಪ್ರಭಾರಿ ಇಒ ತಾಪಂ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಲ್ಲಿ ಕೆಲ ಅಂಗಡಿಗಳ ಮೂಲ ಮಾಲೀಕರು ವಹಿವಾಟು ನಡೆಸುತ್ತಿಲ್ಲ. ಯಾವ ಉದ್ದೇಶಕ್ಕಾಗಿ ಪಡೆದಿದ್ದಾರೆಯೋ ಅದು ಇಲ್ಲಿ ಕಾಣ ಸಿಗುತ್ತಿಲ್ಲ. ಕೆಲವರು ಪ್ರಭಾವ ಬಳಸಿ ಅಧಿಕಾರಿಳ ಮೇಲೆ ಒತ್ತಡ ತರುತ್ತಿದ್ದಾರೆ. ಕೂಡಲೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಮಾಲತೇಶ ಬೆಟಕೇರೂರ, ನಾಗರಿಕ