ಜಿಲ್ಲೆ

ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ

ಹಿರೇಕೆರೂರ: ಮಕ್ಕಳು ಮೊಬೈಲ್ ಫೋನ್, ಟಿವಿ ದಾಸರಾಗುವ ಬದಲು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲೆಯ ನೂತನ ಕೊಠಡಿ ಮತ್ತು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಿ ಉನ್ನತ ಗುರಿ ತಲುಪಬೇಕು. ಪ್ರತಿಯೊಬ್ಬರಲ್ಲೂ ಉತ್ತಮ ಪ್ರತಿಭೆ ಅಡಗಿರುತ್ತದೆ, ಅದನ್ನು ಇಂತಹ ವೇದಿಕೆ ಮೂಲಕ ಹೊರತರುವ ಕೆಲಸವಾಗಬೇಕು ಎಂದರು.
ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ರಮೇಶ ಕೋಡಿಹಳ್ಳಿ, ಚಂದ್ರಕಲಾ ಕೋರಿಗೌಡ್ರ, ಸುಧಾ ಚಿಂದಿ, ಕವಿತಾ ಹಾರ‌್ನಳ್ಳಿ, ಹನುಮಂತ ಕುರಬರ, ರಜಿಯಾ ಅಸದಿ, ಶಂಶಾದಬೀ ಕುಪ್ಪೇಲೂರ, ದಿಲ್‌ಶಾದ ಬಳಿಗಾರ, ಭರಮಪ್ಪ ಹರಿಜನ, ಗೋಪಿ ಬಾದಾಮಿ, ತಾಪಂ ಇಒ ಎಚ್. ಶಶಿಧರ, ಬಿಇಒ ಎನ್. ಶ್ರೀಧರ ಹಾಗೂ ಎಸ್‌ಡಿಎಂಸಿ ಸದಸ್ಯರು, ಸಿಬ್ಬಂದಿ ಇದ್ದರು. ಮುಖ್ಯ ಶಿಕ್ಷಕ ಎಂ.ವಿ. ಕಮ್ಮಾರ ನಿರ್ವಹಿಸಿದರು.