ಹಾವೇರಿ: ಒಬ್ಬ ನಿಗಮದ ಅಧ್ಯಕ್ಷ, ಮಗನ ಮನೆ ರೇಡ್ ಮಾಡಿದರೆ 8 ಕೋಟಿ ರೂ. ಸಿಕ್ಕರೆ, ಬಿ.ಸಿ. ಪಾಟೀಲ ಮನೆ ಮೇಲೆ ದಾಳಿ ಮಾಡಿದರೆ ಕನಿಷ್ಠ ಸಾವಿರ ಕೋಟಿ ರೂ. ಸಿಗುತ್ತದೆ. ರೈತರ ಹೆಸರು ಹೇಳುವುದು ಲೂಟಿ ಹೊಡೆಯುವುದು. ಜನರ ಬಳಿ ನಟನೆ ಮಾಡುವುದು ಹೇಗೆ ಎಂದು ಕಲಿತು ಬಿಟ್ಟಿದ್ದಾನೆ. ಇಂಥವರನ್ನು ಸೋಲಿಸಬೇಕು. ರಾಜ್ಯ, ಹಿರೇಕೆರೂರ ಉಳಿಯಬೇಕಾದರೆ ಬಿಜೆಪಿ ಮತ್ತು ಬಿ.ಸಿ. ಪಾಟೀಲ ಸೋಲಲೇಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಹಿರೇಕೆರೂರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಹಿರೇಕೆರೂರಗೆ ಹೊಸಬ ಏನಲ್ಲ. ಅನೇಕ ಸಲ ಇಲ್ಲಿಗೆ ಬಂದಿದ್ದೇನೆ. ಬಿಜೆಪಿಗೆ ಮಾರಾಟವಾಗಿ ಹೋಗಿರುವ ಬಿ.ಸಿ.ಪಾಟೀಲ ಆಗ ನಮ್ಮ ಜತೆಗಿದ್ದರು. ಅವರ ಪರವಾಗಿ ಪ್ರಚಾರಕ್ಕೆ ನಾನು ಕೊನೆಯ ದಿನ ಬಂದಿದ್ದೆ. ಅಂದು ಬರದಿದ್ದರೆ 2018ರಲ್ಲಿ ಬಿಸಿ ಪಾಟೀಲ ಸೋಲುತ್ತಿದ್ದರು. ಅದನ್ನು ನಮ್ಮಲ್ಲಿ ಇರುವವರೆಗೆ ಹೇಳಿಕೊಂಡು ಓಡಾಡುತ್ತಿದ್ದರು. ಕೇವಲ 555 ಓಟಿನಿಂದ ಗೆದ್ದೆ. ಸಿದ್ದರಾಮಯ್ಯ ಕಾರಣ ಎಂದು ಹೇಳಿದ ಆತ ನಂತರ ಪಾರ್ಟು ಬದಲಾಯಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಈ ತಾಲೂಕಿಗೆ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದೆ. ಹಿರೇಕೆರೂರ ಕೆರೆಗೆ ನೀರು, ಗುಡ್ಡದ ಮಾದಾಪುರ ಕೆರೆಗೆ ನೀರು ತುಂಬಿಸಿದ್ದು ನಮ್ಮ ಕಾಲದಲ್ಲಿ. ರಟ್ಟಿಹಳ್ಳಿ ತಾಲೂಕು ಮಾಡಿದ್ದು ನಮ್ಮ ಕಾಲದಲ್ಲಿ. ಮಡ್ಲೂರು ಏತ ನೀರಾವರಿ ಮಾಡಿದ್ದು ನಮ್ಮ ಕಾಲದಲ್ಲಿ. ಈಗ ಬಿಜೆಪಿಗೆ ಹೋದ ಬಳಿಕ ಆತ ನಾನೇ ಕೆಲಸ ಮಾಡಿದ್ೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ ಎಂದು ಕುಟುಕಿದರು.
ನಮ್ಮನ್ನು ನಮ್ಮಪಕ್ಷವನ್ನು ಹಾಡಿ ಓಡಾಡುತ್ತಿದ್ದ ಬಿ.ಸಿ.ಪಾಟೀಲ ಕೊನೆಯಲ್ಲಿ 20-25 ಕೋಟಿ ಪಡೆದು ಬಿಜೆಪಿಗೆ ಹೋದರು. ಉಪ ಚುನಾವಣೆಯಲ್ಲಿ 30, 40 ಕೋಟಿ ರೂ. ಖರ್ಚು ಮಾಡಿದರು. ಲೂಟಿ ಹೊಡೆದ ಹಣ ಇತ್ತು. ಹೀಗಾಗಿ, ಉಪ ಚುನಾವಣೆಯಲ್ಲಿ ಖರ್ಚು ಮಾಡಿದರು. ಅದೇ ಪಕ್ಷದಲ್ಲಿದ್ದ ಕಾರಣ ಯು.ಬಿ.ಬಣಕಾರ ಕೂಡ ಸಾಥ್ ನೀಡಿದರು. ಯಡಿಯೂರಪ್ಪ ಬೆಂಬಲದಿಂದ ಗೆದ್ದು ಬಂದರು. ಸಚಿವನಾದ ಬಳಿಕ ಏನೂ ಮಾಡಿಲ್ಲ. ಕೇವಲ ಲೂಟಿ ಹೊಡೆದರು. ಅದಕ್ಕೆ ನಾನು ಅಲಿ ಬಾಬಾ ಔರ್ ಚಾಲೀಸ್ ಚೋರ್ ಎಂದು ಕರೆಯುತ್ತೇನೆ. ಚಾಲೀಸ್ ಚೋರ್‌ರಲ್ಲಿ ಬಿ.ಸಿ.ಪಾಟೀಲ ಒಬ್ಬ ಎಂದರು.