ಹಿರೇಕೆರೂರ: ಸಾರ್ವಜನಿಕವಾಗಿ ಗಣಪತಿ ಹಬ್ಬ ಆಚರಣೆಗೆ ವಿಶೇಷ ಹಿನ್ನೆಲೆ ಇದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಗಣೇಶೋತ್ಸವ ತುಂಬಾ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗಜಾನನ ಯುವಕ ಸಮಿತಿಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಬೆಂಗಳೂರಿನ ಗುರುರಾಜ ಹೊಸಕೋಟೆ ತಂಡದಿಂದ ಸೋಮವಾರ ಏರ್ಪಡಿಸಿದ್ದ ಜಾನಪದ ಮನರಂಜನೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
50 ವರ್ಷದ ಹಿಂದಿನ ಗಣಪತಿ ಹಬ್ಬ ಆಚರಣೆಗೆ ಮತ್ತು ಈಗಿನ ಆಚರಣೆಗೆ ಬಹು ವ್ಯತ್ಯಾಸವಿದೆ. ಗಣಪತಿ ವಿಸರ್ಜನೆ ವೇಳೆ ಮಹಿಳೆಯರ ಕುಂಭ ಮೇಳ, ನಂದಿ ಕೋಲು, ಇಂತಹ ವಾದ್ಯಮೇಳಗಳಿಗೆ ಆದ್ಯತೆ ನೀಡಬೇಕು. ವಿಘ್ನನಿವಾರಕ ಗಣೇಶನನ್ನು ಶ್ರದ್ಧೆ, ಭಕ್ತಿ ಪೂರ್ವಕವಾಗಿ ವಿಸರ್ಜಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಂಠಾಧರ ಅಂಗಡಿ ಮಾತನಾಡಿ, ಗುರು ಹಿರಿಯರ, ಯುವಕರ ಸಲಹೆ, ಸೂಚನೆ, ಸಹಾಯ, ಸಹಕಾರದಿಂದ ಇಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಕಾರಣವಾಗಿದೆ ಎಂದರು.
ಪಪಂ ಸದಸ್ಯ ಗುರುಶಾಂತ ಯತ್ತಿನಹಳ್ಳಿ, ಕೊಟ್ರೇಶ ಮಳಗಿ, ಪ್ರಾಚಾರ್ಯ ಡಾ.ಎಸ್.ಪಿ.ಗೌಡರ, ಶಿವಕುಮಾರ ತಿಪ್ಪಶೆಟ್ಟಿ, ಚನ್ನವೀರಪ್ರಭು ಕುಬಸದ ಮಾತನಾಡಿದರು.
ಪತ್ರಕರ್ತರಾದ ಇಂದುಧರ ಹಳಕಟ್ಟಿ, ರವಿ ಮೇಗಳಮನಿ, ಪ್ರಕಾಶ ಬಣಕಾರ, ಪ್ರವೀಣಗೌಡ ಗೌಡರ, ಶಂಕರ ಕೊಪ್ಪದ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಮನರಂಜನಾ ಕಾರ್ಯಕ್ರಮ ನಡೆಯಿತು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ. ಹಂಪಾಳಿ, ಆರ್.ಎಸ್. ಹುಲ್ಮನಿ, ಕಲಾವಿದ ಗುರುರಾಜ ಹೊಸಕೊಟೆ, ಅಕ್ಕನ ಬಳಗದ ಕಾರ್ಯದರ್ಶಿ ಶಶಿಕಲಾ ಕಾಯಕದ, ಪಪಂ ಸದಸ್ಯ ಹರೀಶ ಕಲಾಲ, ಹೊಳಿಯಪ್ಪ ಅಸುಂಡಿ, ನಟರಾಜ ಪಾಟೀಲ ನಿರ್ವಹಿಸಿದರು.