ಹಿರೇಕೆರೂರ: ಪಟ್ಟಣ ಸೇರಿ ತಾಲೂಕಿನ ಕೆಲವೆಡೆ ಗುರುವಾರ ಮಳೆ ಸುರಿಯಿತು.
ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಗೆ ಮಳೆರಾಯ ಕೊಂಚಮಟ್ಟಿಗೆ ತಂಪೆರೆದನು.
ಬೆಳಗ್ಗೆ 6 ಗಂಟೆ ಸುಮಾರಿಗೆ ತುಂತುರು ಆಗಿದ್ದ ಮಳೆ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪಮಟ್ಟಿಗೆ ಜೋರಾಗಿ ಸುರಿಯಿತು. ಬಿಸಿಲಿನ ತಾಪದಿಂದ ಬಳಲಿದ್ದ ಜನತೆಗೆ ಆಹ್ಲಾದಕರ ವಾತಾವರಣ ಸೃಷ್ಟಿಯಾಯಿತು.
ಏಕಾಏಕಿ ಆರಂಭಗೊಂಡ ಮಳೆಯಿಂದಾಗಿ ರೈತರು ತಾವು ಬೆಳೆದಿದ್ದ ಮೆಕ್ಕೆಜೋಳ, ಕಾಳು-ಕಡಿಗಳನ್ನು ತಾಡಪತ್ರಿ ಮುಚ್ಚಿ ಬೆಳೆ ಸಂರಕ್ಷಣೆ ಮಾಡಿಕೊಂಡರು.
ಇನ್ನು ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದ್ದು, ರೈತರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕಿದೆ.