ಜಿಲ್ಲೆ

ಉಡುಪಿ ಆನೆ ಸುಭದ್ರೆ ಮರಳಿಸಲು ಹೊನ್ನಾಳಿ ಭಕ್ತರ ವಿರೋಧ

Davangere - Desk - Shobha Krishna Gowda

ಹೊನ್ನಾಳಿ: ಇಲ್ಲಿನ ಹಿರೇಕಲ್ಮಠದಲ್ಲಿ ಇದ್ದ ಸುಭದ್ರೆ ಆನೆಯನ್ನು ಕರೆದೊಯ್ಯಲು ಬಂದಿದ್ದ ಉಡುಪಿ ಶ್ರೀ ಕೃಷ್ಣ ಮಠದ ಅಧಿಕಾರಿಗಳಿಗೆ ಭಾನುವಾರ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆನೆ ನಮ್ಮದು, ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ಉಡುಪಿ ಮಠದ ಆಡಳಿತ ಮಂಡಳಿಯ ವಾಸುದೇವ ಮಾತನಾಡಿ, ಉಡುಪಿ ಮಠಕ್ಕೆ ಸುಭದ್ರೆಯ ಅವಶ್ಯಕತೆ ಇದ್ದು ಅವಳನ್ನು ಮಠಕ್ಕೆ ಒಪ್ಪಿಸಿ ಎಂದು ಶ್ರೀಗಳು ಕೇಳಿದ್ದಾರೆ. ನೀವು ಏನು ಹೇಳುತ್ತಿರೋ ಅದನ್ನೇ ನಾವು ಮಠಕ್ಕೆ ತಿಳಿಸುತ್ತೇವೆ ಎಂದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ, ವೈಯಕ್ತಿಕ ಅಭಿಪ್ರಾಯಕ್ಕಿಂತ ಸಾರ್ವಜನಿಕರ ಅಭಿಪ್ರಾಯ ಮುಖ್ಯ. ಆನೆಯನ್ನು ನಿಯಮಾನುಸಾರವೇ ಇಲ್ಲಿಗೆ ಕರೆತರಲಾಗಿದೆ. ನಮ್ಮ ಮಠ ಕಾನೂನಿಗೆ ಗೌರವ ಕೊಡುತ್ತದೆ. ಪುತ್ತಿಗೆ ಮಠದವರು ಡಿಎಫ್​ಒ ಶಿವಮೊಗ್ಗ ಅರಣ್ಯ ಇಲಾಖೆಗೆ ಶಾಶ್ವತವಾಗಿ ಹಿಂತಿರುಗಿಸುವ ಬಗ್ಗೆ ಪತ್ರ ಕೂಡ ಬರೆದಿದ್ದಾರೆ ಎಂದರು.

ಉಡುಪಿ ಮಠದ ಅಂಗಳದಲ್ಲಿ ಬೆಳೆದ ಹೆಣ್ಣಾನೆಗೆ ಸೂಕ್ತ ವಾತಾವರಣ ನಿರ್ವಿುಸಲು ಯಶಸ್ವಿಯಾಗದ ಕಾರಣ ಹಾಗೂ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಉಡುಪಿ ಶ್ರೀ ಕೃಷ್ಣ ಮಠದ ಪ್ರಸ್ತುತ ಪರ್ಯಾಯ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಪಾದರ ಆಜ್ಞಾನುಸಾರ ಸಕ್ರೆಬೈಲು ಆನೆ ಬಿಡಾರಕ್ಕೆ ಬಿಡತಕ್ಕದ್ದು ಮತ್ತು ಹೊನ್ನಾಳಿ ಹಿರೇಕಲ್ಮಠಕ್ಕೆ ದಾನ ರೂಪವಾಗಿ ಯಾವುದೇ ನಗದು ವ್ಯವಹಾರ ಇಲ್ಲದೆ ಮಾಲೀಕತ್ವ ವರ್ಗಾಯಿಸಿರುವ ಬಗ್ಗೆ ಪಲಿಮಾರು ಮಠ ನೀಡಿದ ಪತ್ರವನ್ನು ಬಿಡುಗಡೆ ಮಾಡಿದರು.

ಅನಾರೋಗ್ಯದಿಂದ ಕೂಡಿದ ಆನೆಯನ್ನು ಸ್ವೀಕಾರ ಮಾಡಿ ಸಾಕಿ ಸಲಹಿದ್ದೇವೆ. ಅದು ಈ ಪರಿಸರಕ್ಕೆ ಹೊಂದಿಕೊಂಡಿದೆ. ಆದ್ದರಿಂದ ಅದನ್ನು ಬಿಟ್ಟುಕೊಡಲು ಸಾಧ್ಯವಾಗದು ಎಂದು ಮನವರಿಕೆ ಮಾಡಿಕೊಟ್ಟರು.

ಕೊನೆಗೂ ಸುಭದ್ರೆಯನ್ನು ಹಿರೇಕಲ್ಮಠದಿಂದ ಕರೆದುಕೊಂಡು ಹೋಗುತ್ತಾರೆ ಎಂಬ ಆತಂಕ ಸದ್ಯಕ್ಕೆ ದೂರವಾಯಿತು. ಭಕ್ತರು ಸುಭದ್ರೆಗೆ ಜೈಕಾರ ಹಾಕಿದರು.

ಪೊಲೀಸ್ ಇನ್ಸ್​ಸೆ್ಪಕ್ಟರ್ ಸುನಿಲ್​ಕುಮಾರ್, ಆರ್​ಎಫ್​ಒ ಕಿಶೋರ್, ಭಕ್ತರಾದ ಎಚ್.ಎ. ಉಮಾಪತಿ, ಪುರಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹೊಸಕೇರಿ, ಶಿವಕುಮಾರ್, ಸುರೇಶ್, ಗುರುಪಾದಯ್ಯ ಮಠದ್ ಇತರರು ಇದ್ದರು.

ಯಾವುದೇ ಸರ್ಕಾರವು ಭಕ್ತರ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಆನೆ ಸುಭದ್ರೆಯನ್ನು ಭಕ್ತರ ವಿರುದ್ಧವಾಗಿ ಉಡುಪಿ ಮಠಕ್ಕೆ ಕಳುಹಿಸಲು ಸಾಧ್ಯವಿಲ್ಲ. ಆನೆಯನ್ನು ಇಲ್ಲೇ ಉಳಿಸಲು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರೊಂದಿಗೆ ಮಾತನಾಡುವೆ. | ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ