ಮುಂಡರಗಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಹಿರೇಹಡಗಲಿಯ ಅಭಿನವ ಹಾಲಶ್ರೀಗಳನ್ನು ಮಂಗಳವಾರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ವಂಚನೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಬಂಡಿಪಾಳ್ಯ ಪೊಲೀಸರಿಂದ ಬಂಧಿತರಾಗಿರುವ ಅಭಿನವ ಹಾಲಶ್ರೀ ಅವರನ್ನು ಸ್ಥಳೀಯ ಪೊಲೀಸರು ಪಟ್ಟಣಕ್ಕೆ ಕರೆತಂದಿದ್ದರು. ಸಂಜೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದರು. ಬಳಿಕ ತಾಲೂಕಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಲಾಯಿತು.
ಅಭಿನವ ಹಾಲಶ್ರೀಗಳು ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ. ಶ್ರೀಗಳಿಗೆ 10 ಲಕ್ಷ ರೂ., 40 ಲಕ್ಷ ರೂ. ಹಾಗೂ 50 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂಪಾಯಿ ನೀಡಿರುವುದಾಗಿ ಅಮಾನತಿನಲ್ಲಿರುವ ಪಿಡಿಒ ಸಂಜಯ ಚವಡಾಳ ಸೆ.18ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆ.25ರಂದು ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.