ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಪ್ರಯತ್ನಶೀಲತೆ ಇರಲಿ, ಡಿಡಿಪಿಯು ಕೆ.ಪಿ. ಸುರೇಶ ಸಲಹೆ

Dharwada - Basavaraj Idli

ಹುಬ್ಬಳ್ಳಿ: ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಫಲ ನೀಡದೇ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪ್ರಯತ್ನಶೀಲರಾಗಿ ಅಧ್ಯಯನ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಕೆ.ಪಿ. ಸುರೇಶ ಹೇಳಿದರು.

ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್‌ನಲ್ಲಿ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜು, ಆರ್.ಕೆ. ಕೊಕಾಟೆ ಪ್ರೌಢಶಾಲೆ, ತರಳಬಾಳು ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆಯಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಭಾವನೆಗಳು ಮೂಡುತ್ತವೆ. ಸುಸಂಸ್ಕೃತರಾಗಿ ಬೆಳೆಯುತ್ತಾರೆ. ಸಾಧನೆಯ ತುಡಿತ ಹೊರಹೊಮ್ಮುತ್ತದೆ ಎಂದರು.

ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕನವರ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡುವವರಾಗಬೇಕೆಂದು ಹೇಳಿದರು.

ಕೊಕಾಟಿ ಪ್ರೌಢಶಾಲೆ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಆರ್.ವಿ. ಪಾಟೀಲ ಮಾತನಾಡಿದರು.
ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಆರ್.ಎಸ್. ಹನ್ನಿ, ಶಿವಾನಂದ ಹೆಬಸೂರ, ಶಿವಣ್ಣ ಹಂಗರಕಿ, ಶಂಕ್ರಣ್ಣ ಸಂಶಿ, ಮೋಹನ ಬಡ್ನಿ, ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ. ಇತರರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಹನುಮಂತಪ್ಪ ಉಪ್ಪಾರ, ಉಪನ್ಯಾಸಕ ಗಣೇಶ ಮಾಂಡೇಕರ್ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಬಸವರಾಜ ಕುರ್ತಕೋಟಿ ವಾರ್ಷಿಕ ವರದಿ ವಾಚಿಸಿದರು. ಐಶ್ವರ್ಯ ಬಡಿಗೇರ ನಿರೂಪಿಸಿದರು. ಉಪನ್ಯಾಸಕ ವಿರೇಶ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಭಾರತಿ ವೀರನಗೌಡರ ವಂದಿಸಿದರು.