ಮೈಸೂರು: ಖ್ಯಾತ ಹಿಂದುಸ್ತಾನಿ ಶೈಲಿಯ ಗಾಯಕ ಧಾರವಾಡದ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರಿಗೆ ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಎಂ.ವೆಂಕಟೇಶ್ ಕುಮಾರ್ ಮಾತನಾಡಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪಡೆಯಲು ನನ್ನ ಗುರುಗಳಾದ ಪಂಡಿತ್ ಪುಟ್ಟರಾಜ ಗವಾಯಿ ಕಾರಣ. ಅವರು ನಮ್ಮಿಂದ ಏನನ್ನೂ ಬಯಸದೆ ಸಂಗೀತ ಕಲಿಸಿದರು. ಹಣ ನೀಡಿ ಸಂಗೀತ ಕಲಿಯುವಷ್ಟು ಶಕ್ತಿ ನಮಗೆ ಇರಲಿಲ್ಲ. ನಾವು ಗುರುಗಳಿಗೆ ನೀಡಿದ್ದು ಕೇವಲ 65 ರೂ.. ಆ 65 ರೂ.ಗಳಲ್ಲಿ ಅವರು ನಮಗೆ ಊಟ, ವಸತಿ ಉಚಿತವಾಗಿ ನೀಡಿ ಸಂಗೀತ ಕಲಿಸಿದರು. ಗುರುಗಳು ಹಳ್ಳಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಅದರಿಂದ ದೊರೆತ ಹಣದಲ್ಲಿ ನಮ್ಮನ್ನು ಸಲಹಿದರು ಎಂದು ಸ್ಮರಿಸಿದರು.
ಗುರುಗಳು ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದರು. ಒಮ್ಮೆ ಪಂಡಿತ್ ಭೀಮಸೇನ ಜೋಶಿ ಅವರು ನಿಮ್ಮ ಗುರುಗಳು ಯಾರು ಎಂದು ಕೇಳಿದರು. ನಾನು ಪಂಡಿತ್ ಪುಟ್ಟರಾಜ ಗವಾಯಿ ಎಂದು ಹೇಳಿದಾಗ ಅವರು ನನಗೆ ಕೈ ಮುಗಿದು ಗೌರವಿಸಿದರು. ನಮ್ಮ ಗುರುಗಳು ತಮಗಾಗಿ ಏನು ಮಾಡಿಕೊಳ್ಳಲಿಲ್ಲ, ಬಡ ಮಕ್ಕಳ ಸಲುವಾಗಿ ಬದುಕಿದರು. ಜಾತಿ ನೋಡಬೇಡ, ನೀತಿ ನೋಡಿ ಎಂದು ನಮ್ಮ ಗುರುಗಳು ನಮಗೆ ಕಲಿಸಿದರು. ನನ್ನಂತಹ ಬಡ ವಿದ್ಯಾರ್ಥಿ ಹಳ್ಳಿಯಿಂದ ದಿಲ್ಲಿವರೆಗೆ ಹೋಗಲು ಗುರುಗಳು ಕಾರಣ. ಸಂಗೀತ ಕ್ಷೇತ್ರದಲ್ಲಿ ವೆಂಕಟೇಶ್ ಕುಮಾರ್ ಎಂದರೆ ದೇಶದ ಜನರು ಗುರುತಿಸುತ್ತಾರೆ. ಇದಕ್ಕೆ ಕಾರಣ ಗುರುಗಳು ಕಾರಣ ಎಂದರು.
ವೆಂಕಟೇಶ್ ಕುಮಾರ್ ಸನ್ಮಾನ ಸ್ವೀಕರಿಸಿದ ನಂತರ ಕನಕದಾಸರ ರಚನೆಯ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ’ ಹಾಡನ್ನು ಹಾಡಿದ ರಂಜಿಸಿದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ಸಿ.ಅನಿಲ್ ಕುಮಾರ್, ಎ.ಆರ್. ಕೃಷ್ಣಮೂರ್ತಿ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಡಿ.ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ ಮಾನಸ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯೂಕೇಶ್ ಕುಮಾರ್ ಹಾಗೂ ಇತರರು ಇದ್ದರು.
ದಸರಾ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಮೂರ‌್ನಾಲ್ಕು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಈ ಸೇವೆಯ ಫಲವಾಗಿ ನನಗೆ ಕರ್ನಾಟಕ ಸಂಗೀತ ವಿದ್ವಾನ್ ಪ್ರಶಸ್ತಿಯ ಸತ್ಕಾರ ದೊರೆತ್ತಿದೆ. ಇದು ನನಗೆ ಮರೆಯಲಾರದ ಕ್ಷಣವಾಗಿದೆ.
ಪಂಡಿತ್ ಎಂ. ವೆಂಕಟೇಶ್ ಕುಮಾರ್, ಹಿಂದುಸ್ತಾನಿ ಗಾಯಕರು
ಮೈಸೂರು ಮಹಾರಾಜರು ಸಂಗೀತ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಾ ಬಂದರು. ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಮಹಾರಾಜರು ನೀಡುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಕರ್ನಾಟಕ ಸಂಗೀತ ವಿದ್ವಾನ್ ಪ್ರಶಸ್ತಿ ನೀಡುತ್ತಿದೆ. ಮಹಾರಾಜ ಕಾಲದಲ್ಲಿ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ದೊರೆತ ಪ್ರೋತ್ಸಾಹದ ಮಾದರಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರ ಮಾಡುತ್ತಿದೆ
ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಮೈಸೂರು ದಸರಾ ಶ್ರೀಮಂತ ಪರಂಪರೆಯ ಸಂಕೇತ. ಕನ್ನಡ ಸಂಸ್ಕೃತಿ, ಕಲಾ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ದಸರಾದಲ್ಲಿ ಆಗುತ್ತದೆ. ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯವನ್ನು ದಸರಾ ಮಾಡುತ್ತದೆ. ವೆಂಕಟೇಶ್ ಕುಮಾರ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ದೊರೆತ್ತಿರುವುದು ಎಲ್ಲರು ಹೆಮ್ಮೆ ಪಡುವ ವಿಚಾರ.
ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ
ಹಿಂದುಸ್ತಾನಿ ಗಾಯಕರಾದ ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ದೊರೆತ್ತಿರುವುದು ಕೇವಲ ಅವರಿಗೆ ಮಾತ್ರವಲ್ಲ ನಮ್ಮೆಲ್ಲರಿಗೂ ಸಂದ ಗೌರವ. ಪಂಡಿತ್ ಪುಟ್ಟರಾಜ ಗವಾಯಿ ಅವರ ಗರಡಿಯಲ್ಲಿ ಪಳಗಿದ ಅವರು ದೇಶ, ವಿದೇಶಗಳಲ್ಲಿ ಸಂಗೀತ ರುಚಿಯನ್ನು ಉಣಬಡಿಸಿದ್ದಾರೆ. ಅವರು ಮತ್ತಷ್ಟು ಎತ್ತರಕ್ಕೆ ಏರಲಿ. ಸಾಮಾನ್ಯ ಬಡತನದ ಕುಟುಂಬದಿಂದ ಬಂದು ಇಷ್ಟೊಂದು ದೊಡ್ಡ ಸಾಧನೆ ಮಾಡಿರುವುದು ಪ್ರತಿಯೊಬ್ಬರು ಆಶ್ಚರ್ಯ ಪಡಬೇಕಾದ ವಿಚಾರ. ಸಂಗೀತ ಒಲಿಯಲು ಶ್ರದ್ಧೆ, ಭಕ್ತಿ ಹಾಗೂ ಏಕಾಗ್ರತೆ ಇರಬೇಕು. ಕಲಿಯಬೇಕು ಎಂಬ ಮನಸ್ಸು ಇದ್ದರೆ ಮಾತ್ರ ಸಂಗೀತವನ್ನು ಕರತಗ ಮಾಡಿಕೊಳ್ಳಲು ಸಾಧ್ಯ. ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಬರಲಿ. ಮೈಸೂರು ಮಹಾರಾಜರು ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚಿನ ಗೌರವ, ಪ್ರೋತ್ಸಾಹ ನೀಡುತ್ತಾ ಬಂದರು. ನಮ್ಮ ಸರ್ಕಾರ ಸಹ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ವಾಸುದೇವಾಚಾರ್ಯ ಹೆಸರಿನಲ್ಲಿ ಕಾರ್ಯಕ್ರಮ
ಮೈಸೂರಿನ ಸಂಗೀತ ನಿಧಿ ವಾಸುದೇವಾಚಾರ್ಯ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅವರ ಜನ್ಮ ದಿನದಂದು ವಿಶೇಷ ಸಂಗೀತ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದರು. ಇದಕ್ಕೂ ಮುನ್ನ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಾಸುದೇವಾಚಾರ್ಯ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಬೇಕು ಎಂದು ಮುಖ್ಯಮಂತ್ರಿ ಅವರ ಗಮನ ಸೆಳೆದಿದ್ದರು.