ಕೊಳ್ಳೇಗಾಲ: ಭಾರತೀಯ ಕಲೆ ಮತ್ತು ಸಂಸ್ಕೃತಿ ಅವಿಭಾಜ್ಯ ಅಂಗ ಎಂದೇ ಕರೆಯಲ್ಪಡುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಸಾಧನ ಸಂಗೀತ ಶಾಲೆ ಆರಂಭಿಸಿದ ಕೀರ್ತಿ ಹಾರ‌್ಮೋನಿಯಂ ವಾದಕ ಎಂ.ರಾಜೇಶ್ ಹಾಗೂ ರಿದಂಪ್ಯಾಡ್ ವಾದಕ ಎಂ.ಮಹೇಶ್ ಸಹೋದರರಿಗೆ ಸಲ್ಲುತ್ತದೆ.
ತಾಲೂಕಿನ ಹಳೇ ಹಂಪಾಪುರ ಗ್ರಾಮದ ಶಿವಪ್ಪ ಮತ್ತು ಶಿವಮ್ಮ ಅವರ ಪುತ್ರರಾದ ರಾಜೇಶ್ ಹಾಗೂ ಮಹೇಶ್ ಕಲಾ ಆಧಾಕರಾಗಿದ್ದಾರೆ. ಸಂಗೀತದ ಮೇಲೆ ಅತೀವ ಪ್ರೀತಿ, ಶ್ರದ್ಧೆ ಹೊಂದಿರುವ ಇವರು ಕಲಾ ಸರಸ್ವತಿಯನ್ನು ಆರಾಧಿಸುತ್ತ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಇರಾದೆ ಇವರದ್ದು. ಗಡಿ ಜಿಲ್ಲೆ ಚಾಮರಾಜನಗರದ ಗ್ರಾಮೀಣ ಮಕ್ಕಳು, ಯುವಕ-ಯುವತಿಯರು ಹಾಗೂ ಆಸಕ್ತರಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸಬೇಕೆಂಬ ಅಭಿಲಾಷೆ ಇವರದ್ದಾಗಿದ್ದು, ಈ ನಿಟ್ಟಿನಲ್ಲಿ ಕೊಳ್ಳೇಗಾಲದಲ್ಲಿ ಸಾಧನ ಸಂಗೀತ ಶಾಲೆ ತೆರೆದು ತರಬೇತಿ ನೀಡುತ್ತಿದ್ದಾರೆ.
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ಕಲಿಯಲು ಜಿಲ್ಲೆಯಿಂದ ಆಸಕ್ತರು ಮೈಸೂರಿನ ಜಿಲ್ಲೆಯ ಕಡೆ ತೆರಳಬೇಕಿತ್ತು. ಇದನ್ನರಿತ ರಾಜೇಶ್ ಹಾಗೂ ಮಹೇಶ್ ಕೊಳ್ಳೇಗಾಲದಲ್ಲಿಯೇ ಸಂಗೀತ ಕಲಿಕಾ ಆಸಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲೆಮರೆ ಕಾಯಿಯಂತೆ ಸಂಗೀತ ಕಲೆ ಬೆಳೆಸಿ, ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಡ್ರಾಮಾ ಮಾಸ್ಟರ್ ಎಂ.ರಾಜೇಶ್ ಎಂದೇ ಪ್ರಸಿದ್ಧಿ: ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕಲಿಯುವ ಆಸೆ ಹೊಂದಿದ್ದ ಇವರು, ಪ್ರೌಢಶಾಲೆ ವ್ಯಾಸಂಗದ ವೇಳೆ ಪಂದ್ಯಗಳನ್ನು ಎಂ.ರಾಜೇಶ್ ರಾಗವಾಗಿ ಹಾಡುತ್ತಿದ್ದರು. ಇದನ್ನು ಗುರುತಿಸಿದ ಶಿಕ್ಷಕಿ ಬೃಂದಾ ಆತನನ್ನು ಹುರಿದುಂಬಿಸಿದ್ದರು. ಅಂತೆಯೆ ರಾಜೇಶ್ ಪಟ್ಟಣದ ದೇವಾಂಗ ಪೇಟೆಯ ವಿದ್ವಾನ್ ರಂಗಸ್ವಾಮಿ ಅವರ ಬಳಿ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿಕೆ ಅಭ್ಯಾಸ ಮಾಡಿದರು. ನಂತರ ಕಳ್ಳಿಪುರ ಮಹದೇವಸ್ವಾಮಿ ಅವರ ಬಳಿ ಭಜನೆ, ಜನಪದ ಹಾಡುಗಾರಿಕೆ, ಸಂಗೀತ ನುಡಿಸುವುದನ್ನು ಕಲಿತರು. ಬಳಿಕ ದೊರೆಸ್ವಾಮಿ ಅವರಿಂದ ಕೀಬೋರ್ಡ್ ತರಬೇತಿ ಪಡೆದು ಹಂತ ಹಂತವಾಗಿ ಎಲ್ಲ ಕಲಾವಿದರ ಜತೆ ಕೀಬೋರ್ಡ್, ನಾಟಕ, ಸಾಮಾಜಿಕ ನಾಟಕ, ಹರಿಕಥೆ ಕಾರ್ಯಕ್ರಮ ನಡೆಸುತ್ತ ಡ್ರಾಮಾ ಮಾಸ್ಟರ್ ಎಂದೇ ಪ್ರಸಿದ್ಧರಾದರು.
ಈ ನಡುವೆ ಶಂಕರ ವಾಹಿನಿಯ ನೀನಾ ನಾನ ಎಂಬ ಕಾರ್ಯಕ್ರಮದಲ್ಲಿ ಅಂತಿಮ ಹಂತ ತಲುಪಿ ಭಜನಾ ಸಾಮ್ರಾಟ್ ಎಂಬ ಬಿರುದು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಿರಿಯ ರಂಗಭೂಮಿ ನಿರ್ದೇಶಕ ಪ್ರಶಸ್ತಿ ದೊರೆತಿದೆ. 2016ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂಗೀತಾ ದಿನಾಚರಣೆಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ 7 ಜನರ ಪೈಕಿ ಇವರೂ ಒಬ್ಬರು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ 32 ಸಾವಿರ ವಾದ್ಯಗಾರರು ಏಕ ಕಾಲದಲ್ಲಿ ಪ್ರದರ್ಶನ ನೀಡಿದ್ದರು. ದಕ್ಷಯಜ್ಞ ನಾಟಕವನ್ನು 112 ಕಡೆಗಳಲ್ಲಿ ನಿರ್ದೇಶಿಸಿದ್ದಾರೆ.
ಶಕ್ತಿ ಮೀರಿ ಪ್ರಯತ್ನ: ಕಲಾ ಆರಾಧಕರಾಗಿರುವ ಈ ಸಹೋದರರು ಹೆಚ್ಚು ಬೇಡಿಕೆ ಇರುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಶಾಲೆ ತೆರೆದಿದ್ದಾರೆ. ಈ ಶಾಲೆ ನಡೆಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಇವೆಲ್ಲ ಕಷ್ಟಗಳ ನಡುವೆ ಶಕ್ತಿ ಮೀರಿ ಶಾಲೆ ತೆರೆದು ಕಲಾ ಸರಸ್ವತಿಯ ಸೇವೆ ಮಾಡುತ್ತಿದ್ದಾರೆ.
ನುರಿತ ಸಂಗೀತಗಾರರಿಂದ ತರಬೇತಿ: 2023ರ ನವೆಂಬರ್‌ನಲ್ಲಿ ಕೊಳ್ಳೇಗಾಲದಲ್ಲಿ ಸಾಧನಾ ಸಂಗೀತ ಶಾಲೆ ಪ್ರಾರಂಭವಾಯಿತು. ಖ್ಯಾತ ಸಂಗೀತಗಾರ ಡಾ.ಪುಟ್ಟರಾಜು ಗವಾಯಿಗಳ ಶಿಷ್ಯರಾದ ಮೈಸೂರಿನ ವಿದ್ವಾನ್ ಪ್ರಭುರಾವ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ಹಾಗೂ ಕೊಳ್ಳೇಗಾಲದ ವಿದ್ವಾನ್ ಕಿಶೋರ್ ಸಜ್ಜಾ ಅವರಿಂದ ಹಿಂದುಸ್ತಾನಿ ತಬಲವಾದ, ಮಹೇಶ್ ಅವರಿಂದ ರಿದಂ ಪ್ಯಾಡ್ ತರಬೇತಿ, ಡ್ರಾಮಾ ಮಾಸ್ಟರ್ ರಾಜೇಶ್ ಅವರಿಂದ ಕೀಬೋರ್ಡ್ ಮತ್ತು ಹಾರ‌್ಮೋನಿಯಂ ತರಬೇತಿ ನೀಡಲಾಗುತ್ತಿದೆ. ಭಾವ ಗೀತೆ, ಭಜನೆ ಗೀತೆಗಳು, ವಚನಗಾಯನ ಕಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗಿಟಾರ್, ಭರತನಾಟ್ಯ ಕಲಿಕೆಯನ್ನೂ ಪ್ರಾರಂಭಿಸುವ ಚಿಂತನೆಯಲ್ಲಿದ್ದಾರೆ.
ಸ್ಥಳ: ಕೊಳ್ಳೇಗಾಲದ ದಕ್ಷಿಣ ಬಡಾವಣೆಯ ಗೀತಾ ಪ್ರೈಮರಿ ಶಾಲೆ ರಸ್ತೆಯಲ್ಲಿರುವ ರಾಜೇಶ್ ಮೆಡಿಕಲ್ ಬಳಿಯ ಮನೆ ನಂ.73825 ಮೊದಲನೇ ಮಹಡಿಯಲ್ಲಿ ಸಾಧನ ಸಂಗೀತ ಶಾಲೆಯಿದೆ. ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ರಿಂದ 4 ರವರೆಗೆ ತರಬೇತಿ ನೀಡಲಾಗುತ್ತದೆ. ಆಸಕ್ತರು ವಿವರಗಳಿಗಾಗಿ ರಿದಂ ಪ್ಯಾಡ್ ಮಹೇಶ್-ಮೊ.8618635175, ಹಾರ‌್ಮೋನಿಯಂ ರಾಜೇಶ್-ಮೊ. 8073332731, ಹಂಸವೇಣಿ ಮುಖ್ಯ ಶಿಕ್ಷಕಿ-9620228000 ಸಂಪರ್ಕಿಸಬಹುದಾಗಿದೆ.
ಸಂಗೀತ ನೀಡುವ ತೃಪ್ತಿ ನನಗೆ ಬೇರೆ ವೃತ್ತಿಯಲ್ಲಿ ಕಾಣಲಿಲ್ಲ. ಈ ವೃತ್ತಿ ಗೌರವದ ಜತೆ ಸಾರ್ಥಕ ಬದುಕು ನೀಡಿದೆ. ಹಿಂದೆ, ಹಲವು ಸಮಸ್ಯೆಗಳ ನಡುವೆ ನಾವು ಸಂಗೀತ ಅಭ್ಯಾಸ ಮಾಡಿದೆವು. ಆದರೀಗ ಆಸಕ್ತರಿಗೆ ಹೆಚ್ಚಿನ ಅವಕಾಶವಿದೆ. ನಾವು ಕಲಿತದ್ದನ್ನು ಹಲವರಿಗೆ ಕಲಿಸಬೇಕೆಂಬ ಹಂಬಲದಿಂದ ಸಾಧನಾ ಸಂಗೀತ ಶಾಲೆ ತೆರೆದಿದ್ದೇವೆ.
ರಾಜೇಶ್, ಕೀಬೋರ್ಡ್ ಮತ್ತು ಹಾರ‌್ಮೋನಿಯಂ ವಾದಕರು, ಹಳೇ ಹಂಪಾಪುರ, ಕೊಳ್ಳೇಗಾಲ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಶಾಲೆ ಕಲಿಕೆಗೆ ಮೈಸೂರಿನತ್ತ ಹೋಗಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡು ಈ ಭಾಗದ ಜನರಿಗೆ ಅನುಕೂಲಕ್ಕೆ ಸಾಧನಾ ಸಂಗೀತ ಶಾಲೆ ತೆರೆದಿದ್ದೇವೆ. ಲಾಭ ಗಳಿಸುವುದಕ್ಕೆ ಈ ಕಾಯಕವನ್ನು ಮಾಡುತ್ತಿಲ್ಲ. ಬದಲಾಗಿ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.
ಎಂ.ಮಹೇಶ್ ರಿದಂ ಪ್ಯಾಡ್ ವಾದಕರು, ಹಳೇ ಹಂಪಾಪುರ, ಕೊಳ್ಳೇಗಾಲ
ಫೋಟೋಗಳನ್ನು ಕಳುಹಿಸಲಾಗುವುದು.