ತಿಪಟೂರು: ರಾಜ್ಯದಲ್ಲಿ ನೂರಾರು ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಸಹಾಯ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡುವುದನ್ನು ರಾಜ್ಯದ ಹಿಂದುಗಳು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ಗುಡುಗಿದರು.
ನಗರದಲ್ಲಿ ತಾಲೂಕು ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಧರ್ಮಸ್ಥಳಕ್ಕಾಗಿ ಧರ್ಮಯುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಆದೇಶದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಇಂದು ಪ್ರತಿಭಟನೆ ಮತ್ತು ಹೋರಾಟ ನಡೆಯುತ್ತಿದೆ ಎಂದರು.
ಸರ್ವ ಧರ್ಮದವರಿಗೂ ಉಚಿತ ದಾಸೋಹ ಹಾಗೂ ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ, ದೇವಸ್ಥಾನಗಳ ಜೀಣೋರ್ದ್ಧಾರ ನಡೆಸುತ್ತಿರುವ ಹಾಗೂ ರಾಜ್ಯದ ಸಾವಿರಾರು ಕೆರೆಗಳ ಅಭಿವೃದ್ಧಿ ಮಾಡುತ್ತಿರುವ ಶ್ರೀಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಇದನ್ನು ರಾಜ್ಯದ ಜನರು, ಧರ್ಮಸ್ಥಳ ಕ್ಷೇತ್ರದ ಅಭಿಮಾನಿಗಳು ಎಂದಿಗೂ ಸಹಿಸುವುದಿಲ್ಲ ಎಂದರು.
ದೀಶಾ ಸಮಿತಿಯ ಸದಸ್ಯ ಆಯರಹಳ್ಳಿ ಶಂಕರಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ರಾಹುಲ್ ಗಾಂಧಿ ಹೇಳಿದಂತೆ ಕೇಳುವ ಮೂಲಕ ಯಾವುದೋ ಬುರುಡೆ ವಿಚಾರಕ್ಕೆ ಅನಾಮಿಕ ವ್ಯಕ್ತಿಯ ಮಾತು ಕೇಳಿ ಎಸ್ಐಟಿ ರಚನೆ ಮಾಡಿದ ಸರ್ಕಾರ ಸಾಮಾನ್ಯ ಮನುಷ್ಯನ ನ್ಯಾಯಕ್ಕಾಗಿ ಎಸ್ಐಟಿ ರಚನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಹರಿಸಮುದ್ರ ಗಂಗಾಧರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಂಗರಾಜು ಮಾತನಾಡಿದರು.
ನಗರದ ಗ್ರಾಮದೇವತೆ ಕೆಂಪಮ್ಮ ದೇವಸ್ಥಾನದಿಂದ ದೊಡ್ಡಪೇಟೆ ಮಾರ್ಗವಾಗಿ ನೂರಾರು ಮಹಿಳೆಯರು ಧರ್ಮಸ್ಥಳಕ್ಕೆ ಜಯವಾಗಲಿ ಎಂಬ ಘೋಷದೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ರಾಮಮೋಹನ್, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಮುಖಂಡರಾದ ತರಕಾರಿ ಗಂಗಾಧರ್ ಬಿಸಿಲೇಹಳ್ಳಿ ಜಗದೀಶ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಗ್ರಾಮಾಂತರ ಅಧ್ಯಕ್ಷ ಸತೀಶ್ ಇದ್ದರು.