ಮೈಸೂರು: ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಸಫಲವಾಗದಿದ್ದರೆ ಖಚಿತವಾಗಿ ಹಿಂದುಗಳ ಮನೆಗಳು ಉಳಿಯುವ ನಂಬಿಕೆ ಇಲ್ಲ ಎಂದು ಪ್ರವಚನಕಾರ ಪಾವಗಡ ಪ್ರಕಾಶ್ ಆಚಾರ್ಯ ಎಚ್ಚರಿಸಿದರು.
ದತ್ತಸೇನೆ ಮತ್ತು ಉಪನ್ಯಾಸ ಮಾಲಿಕೆ ಸಮಿತಿಯಿಂದ ನಗರದ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ‘ವೇದ ಸ್ವರೂಪ ದರ್ಶನ ಮತ್ತು ದತ್ತಾವತಾರ’ ಕುರಿತ ಮೂರು ದಿನಗಳ ಪ್ರವಚನ ಮಾಲಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐದು ಸಾವಿರ ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿರುವ ಭಾರತದಲ್ಲಿ ಹಿಂದೆ ಮುಸ್ಲಿಂ-ಕ್ರಿಶ್ಚಿಯನ್ ಧರ್ಮಗಳು ಇರಲಿಲ್ಲ. ಆದರೆ ಕಾಲಾನಂತರ ಮುಸ್ಲಿಂ, ಕ್ರಿಶ್ಚಿಯನ್‌ರು ಬಂದು ನಮ್ಮ ಹಿಂದುಗಳನ್ನು ಮತಾಂತರಗೊಳಿಸಿದರು. ಈಗ ಜನಸಂಖ್ಯೆಯ ಶೇ.25ರಷ್ಟು ಇದ್ದಾರೆ ಎಂದರು.
ಕುರಾನ್ ಹುಟ್ಟಿದ್ದು 1500ಗಳ ಹಿಂದೆ. ಆದರೆ 5 ಸಾವಿರ ವರ್ಷಗಳಿಂದಿರುವ ಹಳ್ಳಿಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಅತಿ ಹೆಚ್ಚು ಭೂಮಿ ಹೊಂದಿರುವ ಎರಡ್ಮೂರು ಸಂಸ್ಥೆಗಳಿವೆ. ಅದರಲ್ಲಿ ಮೂರನೇ ಸಂಸ್ಥೆ ವಕ್ಫ್ ಬೋರ್ಡ್ ಆಗಿದೆ ಎಂದು ಹೇಳಿದರು.
ಈಗ ಎಲ್ಲೆಡೆ ಆಸ್ತಿ ನಮ್ಮದು ಎನ್ನುತ್ತಿದ್ದಾರೆ. ಹೀಗಾಗಿ ಹಿಂದುಗಳ ಭೂಮಿಯನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಒಂದು ವೇಳೆ ಈ ಕಾಯ್ದೆ ತರಲು ಸಫಲವಾಗದಿದ್ದರೆ ಖಚಿತವಾಗಿ ಹಿಂದು ಮನೆಗಳು ಉಳಿಯುವ ನಂಬಿಕೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಪಂಚದ ಅತ್ಯಂತ ಪ್ರಾಚೀನ ಗ್ರಂಥ ವೇದ. ಬೇರೆ ಧರ್ಮ, ಜನಾಂಗಗಳು ಅಂಬೆಗಾಲು ಇಡುತ್ತಿರುವ ಸಂದರ್ಭದಲ್ಲಿ ಭಾರತೀಯರು ವೇದಗಳ ದರ್ಶನ ಮಾಡಿದ್ದರು. ಭಾರತೀಯತೆಯನ್ನು ಧ್ವಂಸಗೊಳಿಸಲು ನೂರಾರು ವರ್ಷಗಳಿಂದ ಸತತ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ನಾವು ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಸನಾತನಿಗಳಾಗಿ ಇರುವುದಿಲ್ಲ. ಹಾಗಾಗಿ ಪದವಿ, ಸ್ನಾತಕೋತ್ತರ ಪದವಿ, ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ನಿಮ್ಮ ಮಕ್ಕಳಿಗೆ ವೇದಗಳನ್ನು ಓದಿಸಬೇಕು. ಭಾರತೀಯ ಉಡುಪುಗಳನ್ನು ಧರಿಸಬೇಕು. ಮಹಿಳೆಯರು ಹಣೆಗೆ ಕುಂಕುಮ ಇಡಬೇಕು. ಕಷ್ಟವಾದರೂ ಧರ್ಮ ಪರಿಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ವಾತನಾಡಿ, ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ ವೇದ ಉಪನಿಷತ್ತು, ಭಗವದ್ಗೀತೆ ಮಹಾಭಾರತ ಭಾಗದಲ್ಲಿ ಬರುವ ಆಯಾಮಗಳು ಇತಿಹಾಸ ಪರಂಪರೆ ಸಂಸ್ಕೃತಿ ಆಧ್ಯಾತ್ಮಿಕತೆಯ ಸಾರಾಂಶಗಳ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಬೇಕಿದೆ ಎಂದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ವಿಪ್ರ ಮುಖಂಡರಾದ ನಂ.ಶ್ರೀಕಂಠಕುಮಾರ್, ಕೆ.ಆರ್.ಸತ್ಯನಾರುಂಣ, ಕೆ.ರಘುರಾಮ್ ವಾಜುಪೇಯಿ, ಉದ್ಯಮಿ ಮಹೇಶ್ ಶೆಣೈ, ದತ್ತ ಸೇನೆಯ ಸತ್ಯನಾರಾಯಣ, ಯುವ ವಿಕಾಸ್ ಶಾಸ್ತ್ರೀ, ಶ್ರೇಯಸ್ ಇತರರು ಇದ್ದರು.
ವಿಧಾನಸೌಧ ನಮ್ಮದೆನ್ನುತ್ತಿದ್ದರು
ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಒಂದು ವೇಳೆ ಅನುಮತಿ ಕೊಟ್ಟಿದ್ದರೆ ಇಡೀ ವಿಧಾನಸೌಧ ತಮ್ಮದೆಂದು ಹೇಳುತ್ತಿದ್ದರು. ಒಂದು ಬಾರಿ ನಮಾಜ್ ಮಾಡಿದ ಜಾಗವನ್ನು ಅವರು ನಮ್ಮದೆಂದು ಬಿಡುತ್ತಾರೆ. ಅಂತಹ ದರಿದ್ರ ಕಾನೂನುಗಳಿವೆ ಎಂದು ಪಾವಗಡ ಪ್ರಕಾಶ್ ಆಚಾರ್ಯ ಬೇಸರ ವ್ಯಕ್ತಪಡಿಸಿದರು.
ಬೈಬಲ್ ಪ್ರಕಾರ ಕೇಕ್ ಎಂದರೆ ಮಾಂಸದ ತುಂಡಾಗಿದ್ದು, ಅದಕ್ಕೆ ಕೋಳಿ ಮೊಟ್ಟೆ ಹಾಕಿರುತ್ತಾರೆ. ನಮಗೆ ಗೊತ್ತಿಲ್ಲದೆ ಪಾಶ್ಚಿಮಾತ್ಯರು ಹಿಂದು ಸಂಸ್ಕೃತಿಯನ್ನು ನಾಶಗೊಳಿಸಲು ನಡೆಸುವ ಷಡ್ಯಂತ್ರ ಇದು. ಭಾರತೀಯರು ಜಾಗೃತರಾಗಿ ಹುಟ್ಟಿದ ಹಬ್ಬಕ್ಕೆ ಕೇಕ್ ಕತ್ತರಿಸುವ ಬದಲು ಹೋಳಿಗೆ, ಒಬ್ಬಟ್ಟು ತಿಂದು ಸಂಭ್ರಮಿಸಿ.
ಪಾವಗಡ ಪ್ರಕಾಶ್ ಆಚಾರ್ಯ