ಜಿಲ್ಲೆ

ವಿವಿಧತೆಯಲ್ಲಿ ಏಕತೆ ಕಾಣುವ ಹಿಂದೂ ಧರ್ಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸರ್ಜಾಪುರ : ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮವನ್ನು ತೊರೆದು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿರುವವರಲ್ಲಿ ಜಾಗೃತಿ ಮೂಡಿಸಿ ಮರಳಿ ಹಿಂದೂ ಧರ್ಮ ಸ್ವೀಕರಿಸುವಂತೆ ಮಾಡಬೇಕಿದೆ ಎಂದು ಇಸ್ಕಾನ್ ಸಂಸ್ಥೆ ಮುಖ್ಯಸ್ಥ ವೇಣುಮಾದವ ದಾಸ್ ತಿಳಿಸಿದರು.

ಸರ್ಜಾಪುರ ಸಮೀಪದ ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಪುರ ಗೇಟ್ ಬಳಿ ಇರುವ ಟ್ರಿನಿಟಿ ಅಪಾರ್ಟ್‌ಮೆಂಟ್ ಆವರಣದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಅಂಗವಾಗಿ ಹರೇ ಶ್ರೀ ಕೃಷ್ಣ ಇಸ್ಕಾನ್ ದೊಮ್ಮಸಂದ್ರ ವತಿಯಿಂದ ಭಾನುವಾರ ಆಯೋಜಿಸಿದ್ದ ಭಾಜನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಹಿಂದೂ ಧರ್ಮವೂ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಧರ್ಮವಾಗಿದೆ ಆದರೆ ಕೆಲವೊಂದಷ್ಟು ಮಂದಿಯನ್ನು ಗುರಿಯಾಗಿಸಿಕೊಂಡು ಹಿಂದೂ ಧರ್ಮದ ಮೇಲೆ ಅಪನಂಬಿಕೆ ಬರುವಂತೆ ಮಾಡಿ ಅವರನ್ನು ತಮ್ಮ ಧರ್ಮಗಳತ್ತ ಸೆಳೆಯುತ್ತಿರುವುದು ಶೋಚನಿಯ ಎಂದರು.

ಶ್ರೀಕೃಷ್ಣ ಹರಿಕೀರ್ತನ, ಭಜನೆ, ನಗರ ಸಂಕೀರ್ತನ, ಹರಿ ನಾಮಸ್ಮರಣೆ ಮಾಡುತ್ತ ರಾಜಬೀದಿಗಳಲ್ಲಿ ನೂರಾರು ಕೃಷ್ಣ ಭಕ್ತರು ಭಜನೆ ಮಾಡುತ್ತಾ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀಮದ್‌ಅಭಯ ಚರಣ ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಇಸ್ಕಾನ್ ಮುಖಂಡರಾದ ಸಂತೋಷ್, ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ಖಜಾಂಚಿ ವಿ. ವೆಂಕಟೇಶ್ ರೆಡ್ಡಿ, ಟ್ರಿನಿಟಿ ಅಪಾರ್ಟ್‌ಮೆಂಟ್ ಬಡವಣೆಯ ಪದಾಧಿಕಾರಿಗಳಾದ ಗೀತಾ ಸತೀಶ್, ಸಬೀತಾ, ಕಲ್ಯಾಣ್, ಶ್ರೀನಿವಾಸ ಮತ್ತಿತ್ತರರು ಹಾಜರಿದ್ದರು.