ಸೊರಬದಲ್ಲಿ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಕೆ.ಆರ್.ಸುನೀಲ್, ಮಹಾಬಲೇಶ್ವರ ರಾವ್, ರಾಜೇಶ್‌ಗೌಡ, ಶಶಿಕುಮಾರ್ ಇತರರಿದ್ದರು.  
ಜಿಲ್ಲೆ

ಪರಕೀಯರ ನಿರಂತರ ದಾಳಿ ನಡುವೆಯೂ ಹಿಂದು ಧರ್ಮ ಗಟ್ಟಿಯಾಗಿ ನೆಲೆ

ಸೊರಬ: ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಹಿಂದುಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ. ತ್ಯಾಗದ ಪರಂಪರೆ ನಮ್ಮದು ಎನ್ನುವುದನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್ ಹೇಳಿದರು.

ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಮಾತನಾಡಿ, ಹಿಂದು ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದಾಗಲೂ ಧರ್ಮವೂ ಈ ನೆಲದಲ್ಲಿ ನೆಲೆಯೂರಿದೆ. ಹಿಂದು ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನೂ ಇಂದಿನ ಪೀಳಿಗೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಹಿಂದು ಧರ್ಮದ ಮೇಲೆ ಅನೇಕ ಆಕ್ರಮಣಗಳಾಗಿವೆ. ಹಿಂದು ಸಮಾಜದ ಯುವಕರನ್ನು ಬಡಿದೆಬ್ಬಿಸಲು ಶೌರ್ಯ ಜಾಗರಣ ರಥಯಾತ್ರೆ ದೇಶಾದ್ಯಂತ ನಡೆಯುತ್ತಿದೆ ಎಂದರು.
ವಿಹಿಂಪ ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ರಾವ್ ಮಾತನಾಡಿ, ಭಾರತದ ಮೇಲೆ ಆಕ್ರಮಣ ನಡೆದಾಗಲೂ ಹಿಂದು ಧರ್ಮ ಉಳಿದಿದೆ. ಹಿಂದು ಧರ್ಮದು ಸೋಲಿನ ಇತಿಹಾಸವಲ್ಲ ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತಿಳಿಸುವುದು ಅಗ್ಯವಿದೆ. ಜಗತ್ತಿನಲ್ಲಿ ಹಿಂದುಗಳಿಗೆ ಉಳಿದಿರುವುದು ಭಾರತ ಮಾತ್ರ. ದೇಶ ಹಿಂದುಸ್ತಾನವಾಗಬೇಕು. ವಿಹಿಂಪ ಸ್ಥಾಪನೆಯಾಗಿ 60 ವರ್ಷ ಹಾಗೂ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಎಂದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಶೌರ್ಯ ಜಾಗರಣ ರಥಯಾತ್ರೆಯನ್ನು ಸ್ವಾಗತಿಸಿ, ರಾಜಬೀದಿಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ವಿಭಾಗ ಸಂಯೋಜಕ ರಾಜೇಶ್‌ಗೌಡ, ಜಿಲ್ಲಾ ಸಹ ಸಂಯೋಜಕ ಶಶಿಕುಮಾರ್, ತಾಲೂಕು ಸಹ ಸಂಯೋಜಕ ಮಣಿಕಂಠ, ನಗರ ಸಂಯೋಜಕ ಎಸ್.ಎನ್.ಶರತ್, ವಿಹಿಂಪ ಸಾಗರ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್.ಚಂದನ್, ಜಿಲ್ಲಾ ಮಂದಿರ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ ಎಂ.ಎಸ್.ಕಾಳಿಂಗ್‌ರಾಜ್, ಮಾತೃ ಮಂಡಳಿಯ ವಾಸಂತಿ ನಾವುಡಾ, ವೀಣಾ ಶ್ರೀಧರ್, ದುರ್ಗಾ ವಾಹಿನಿ ಕೋಮಲಾ ಪುರಾಣಿಕ್, ಪ್ರಮುಖರಾದ ಡಾ. ಎಚ್.ಇ.ಜ್ಞಾನೇಶ್, ಪಾಣಿ ರಾಜಪ್ಪ, ಸಂಜೀವ್ ಆಚಾರ್, ನಾಗರಾಜ ಗುತ್ತಿ, ಸಿ.ಪಿ.ಈರೇಶ್ ಗೌಡ, ಮಹೇಶ್ ಖಾರ್ವಿ, ಮಹೇಶ್ ಗೋಖಲೆ, ಆಶಿಕ್ ನಾಗಪ್ಪ, ನಿರಂಜನ್, ನೆಮ್ಮದಿ ಶ್ರೀಧರ್, ಅಮೃತಾ, ಕೆ.ವಿ.ವಿನಾಯಕ, ರಾಘು ಮಡಿವಾಳ, ಉಮಾಶಂಕರ, ಪ್ರವೀಣ, ಆನಂದ, ಅಭಿ ಹೊಯ್ಸಳ ಇತರರಿದ್ದರು.