ಸೋಮವಾರಪೇಟೆ: ನಮ್ಮ ಧರ್ಮ ಮತ್ತು ಆಚರಣೆಗಳನ್ನು ನಮ್ಮವರೇ ತೆಗಳುವುದರಿಂದ ನಮ್ಮ ದೇಶದಲ್ಲಿಯೇ ಹಿಂದು ಧರ್ಮಕ್ಕೆ ಧಕ್ಕೆ ಬರುತ್ತಿದೆ ಎಂದು ಇಲ್ಲಿನ ವಿರಕ್ತ ಮಠದ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕೊಡವ ಸಮಾಜದಲ್ಲಿ ವಿಶ್ವ ಹಿಂದೂ ಪರಿಷದ್ ಸೋಮವಾರಪೇಟೆ ಪ್ರಖಂಡದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನ ಹಾಗೂ ಷಷ್ಟಿ ಪೂರ್ತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿ.ಹಿಂ.ಪ. ಮಠ ಮಾನ್ಯಗಳು ಹಿಂದು ಧರ್ಮವನ್ನು ರಕ್ಷಿಸುತ್ತಾ ಬರುತ್ತಿದೆ. ಮುಂದೆ ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಧರ್ಮರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ದಿಕ್ಸೂಚಿ ಭಾಷಣದಲ್ಲಿ ವಿ.ಹಿಂ.ಪ. ನ ಜಿಲ್ಲಾ ಬೌದ್ಧಿಕ್ ಪ್ರಮುಖ್ ಚಿ.ನಾ. ಸೋಮೇಶ್ ಮಾತನಾಡಿ, 1964ರ ಆಗಸ್ಟ್ 29ರಂದು ಮುಂಬೈನಲ್ಲಿ ವಿ.ಹಿಂ.ಪ. ಸ್ಥಾಪನೆಯಾಯಿತು. ಇದರ ಸ್ಥಾಪನೆಗೆ ಬಾಬಾ ಅಮ್ಟೆಯವರು ಮೂಲಕಾರಣಿ ಪುರುಷರಾಗಿದ್ದರು. ಅಂದಿನಿಂದ ಸಮಾಜದಲ್ಲಿನ ಹಲವಾರು ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಾ, ಹಿಂದೂ ಸಮಾಜವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.
ವಿ.ಹಿಂ.ಪ.ನ ಸೋಮವಾರಪೇಟೆ ಪ್ರಖಂಡದ ಅಧ್ಯಕ್ಷ ಎ.ಎಸ್.ಮಲ್ಲೇಶ್, ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಮಿಲನಾ ಭರತ್, ಚೌಡ್ಲು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ನೌಕರ ಎಚ್.ಎಚ್.ಹೂವಯ್ಯ ಇದ್ದರು.
1 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ರಾಧೆಯರ ಛಧ್ಮವೇಷ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ, ಪ್ರಶಸ್ತಿಪತ್ರ ನೀಡಲಾಯಿತು.