ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದು ಯುವಕರ ಕೊಲೆ, ಆತ್ಮಹತ್ಯೆಗೆ ಪ್ರಚೋದನೆಯಂತಹ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಶುಕ್ರವಾರ ವಿರಾಜಪೇಟೆಯಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನಲ್ಲಿ ಮೂರು ತಿಂಗಳ ಹಿಂದೆ ಕೊಲೆಯಾದ ದಾಸನಪುರದ ರವಿ ಪುತ್ರ ಮುತ್ತುರಾಜ್ ಮನೆಗೆ ಭೇಟಿ ನೀಡಿ ಕುಟಂಬಸ್ಥರಿಂದ ಮಾಹಿತಿ ಪಡೆದು ಧೈರ್ಯ ತುಂಬಿದರು. ಇದೊಂದು ಜಿಹಾದಿ ಮನಸ್ಥಿತಿಯುಳ್ಳವರಿಂದ ನಡೆದ ಕೃತ್ಯ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕಾಗಿ ಹಿಂದು ಸಂಘಟನೆಗಳು ಬೆಂಬಲವಾಗಿ ನಿಲ್ಲಲಿವೆ. ಯಾವುದೇ ಕಾನೂನು ಹೋರಾಟಕ್ಕೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಹುಣಸೂರಿನ ಮುತ್ತುರಾಜ್, ಕೆ.ಆರ್.ನಗರದ ಪುನಿತ್ ಸಾವು ಒಂದೇ ರೀತಿಯಲ್ಲಿದೆ. ಎರಡೂ ಕಡೆ ಜಿಹಾದಿ ಸಂಸ್ಕೃತಿಯವರು ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಯುವಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಣಸೂರು ತಾಲೂಕು ಮೈಸೂರು ನಗರಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಕೇರಳಕ್ಕೂ ಹತ್ತಿರದಲ್ಲಿದೆ. ಹೀಗಾಗಿ ಎರಡನೇ ಭಟ್ಕಳ ಆಗುವ ಶಂಕೆ ಇದೆ. ಯುವಕರ ಚಟುವಟಿಕೆ ಬಗ್ಗೆ ಪೊಲೀಸರು ನಿಗಾ ಇಡಬೇಕು. ತಪ್ಪಿತಸ್ಥರ ವಿರುದ್ಧ ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ವಿವಿಧ ಹಿಂದುಪರ ಸಂಘಟನೆಗಳ ಮುಖಂಡರಾದ ಸಂಜಯ್ ಮಲ್ಲಪ್ಪ, ಚಂದ್ರಮೌಳಿ ಹಾಜರಿದ್ದರು.