ಕರ್ನಾಟಕ ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ(ರಿ) ವನ್ನು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಮಂಗಳೂರು ಡಾನ್ ಬಾಸ್ಕೊ ಸಭಾಂಗಣದಲ್ಲಿ ಸೋಮವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಕುಸುಮಾ ದೇವಾಡಿಗ, ಸಂಘದ ಗೌರವಾಧ್ಯಕ್ಷ ಮಹೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಹಿರಣ್ಮಯಿ ಮುಂತಾದವರು ಉಪಸ್ಥಿತರಿದ್ದರು.  
ಜಿಲ್ಲೆ

ಹಿಂದು ಜಾತ್ರಾ ವ್ಯಾಪಾರಸ್ಥರಿಗೆ ಭಯ ಬೇಡ- ನೂತನ ಸಂಘ ಉದ್ಘಾಟಿಸಿ ವಜ್ರದೇಹಿ ಸ್ವಾಮೀಜಿ ಅಭಯ

Mangaluru - Prakash MC Manjeshwar

ಹಿಂದು ಜಾತ್ರೆಗಳಲ್ಲಿ ವ್ಯಾಪಾರ ಮಾಡಬೇಕು ಎಂಬ ಉದ್ದೇಶದಿಂದ ಸಂಘಟನೆ ಆರಂಭಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ವ್ಯಾಪಾರಿಗಳ ಸಂಘಟನೆ ಹುಟ್ಟಿಕೊಂಡಿದ್ದು, ನಾವು ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಅವರ ತಾಯಂದಿರು ವ್ಯಾಪಾರಕ್ಕೆ ಬರುವುದಿಲ್ಲ. ನಮ್ಮ ತಾಯಂದಿರು ವ್ಯಾಪಾರಕ್ಕೆ ಬರುತ್ತಾರೆ. ಯಾಕೆಂದರೆ ಅವರಿಗೆ ಮನೆ ನಡೆಸುವ ಕಷ್ಟ ಗೊತ್ತಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಡಾನ್ ಬಾಸ್ಕೊ ಹಾಲ್‌ನಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಘಟನೆ ಇಲ್ಲದಿದ್ದರೆ ನಮಗೆ ಧ್ವನಿ ಇರುವುದಿಲ್ಲ. ಧ್ವನಿ ಇದ್ದಾಗ ಎಲ್ಲವನ್ನೂ ದೃಢವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ನಾವು ವ್ಯಾಪಾರ ಮಾಡುತ್ತ ಬಲಿಷ್ಠರಾಗಿ, ಸಂಘಟನೆಯು ಗಟ್ಟಿಯಾದಾಗ ಮುಂದಿನ ಜನಾಂಗಕ್ಕೆ ಒಳ್ಳೆಯ ದಾರಿ ತೋರಿಸಲು ಸಾಧ್ಯವಾಗುತ್ತದೆ ಎಂದು ಮಾರ್ಗದರ್ಶನ ನೀಡಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ನಾವು ಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ. ಸಂಘಟನೆ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೇಳಿದರು.
ಕದ್ರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕುಸುಮಾ ದೇವಾಡಿಗ, ಸಂಘದ ಗೌರವಾಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹಿರಣ್ಮಯಿ ಸ್ವಾಗತಿಸಿದರು. ಉಪ ಕೋಶಾಧಿಕಾರಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಹಿಜಬ್ ಘಟನೆ ಬಳಿಕ ಸಮಸ್ಯೆ ಸೃಷ್ಟಿ
ವಿಶ್ವ ಹಿಂದು ಪರಿಷತ್ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ, ಎರಡು-ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆ, ರಾಜ್ಯದಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ. ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಎಲ್ಲರೂ ಎಲ್ಲ ಕಡೆ ವ್ಯಾಪಾರ ಮಾಡುತ್ತಿದ್ದರು. ಸಹಮತದಿಂದ ಒಳ್ಳೆಯ ರೀತಿಯಲ್ಲಿ ವ್ಯಾಪಾರ ನಡೆಯುತ್ತಿದ್ದಾಗ ಕರ್ನಾಟಕದಲ್ಲಿ ಹಿಜಬ್ ಸಮಸ್ಯೆ ಹುಟ್ಟಿಕೊಂಡಿತು. ಇದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು ಎಂದು ಅಭಿಪ್ರಾಯಪಟ್ಟರು. ಅಂಗಡಿ ಮುಂಗಟ್ಟುಗಳನ್ನು ಹಾಕುವಾಗ ಭಗವಾಧ್ವ್ವಜ ಹಾಕಬೇಕು. ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಮತ್ತು ಇದಕ್ಕೂ ಮೊದಲು ಹುಟ್ಟಿಕೊಂಡಿರುವ ಸನಾತನ ಹಿಂದು ವ್ಯಾಪಾರಸ್ಥರ ಸಂಘ ಜತೆಯಾಗಿ ಮುಂದುವರಿಯಲಿ ಎಂದು ಹೇಳಿದರು.