ಸಕಲೇಶಪುರ : ಹಿಂದು ದೇವಸ್ಥಾನಗಳ ಮೇಲೆ ಸರ್ಕಾರದ ಹಸ್ತಕ್ಷೇಪ ನಿಲ್ಲಬೇಕು ಎಂದು ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕ ಚಂದ್ರು ಮೊಗವೀರ ಹೇಳಿದರು. ಪಟ್ಟಣದ ಓಂ ಮಂದಿರದಲ್ಲಿ ಕರ್ನಾಟಕ ಮಂದಿರ ಮಹಾಸಂಘ ಹಾಗೂ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಂದಿರ ಅಧಿವೇಶನ ಉದ್ಘಾಟಿಸಿ ಮಾತನಾಡಿ, ದೇವಸ್ಥಾನಗಳು ಹಿಂದಿನ ದಿನಗಳಲ್ಲಿ ಶಿಕ್ಷಣ ಕೇಂದ್ರಗಳಾಗಿದ್ದವು. ಅನ್ನ ದಾಸೋಹ ಕೇಂದ್ರಗಳಾಗಿದ್ದವು. ಕಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಒಂದೊಂದು ದೇವಸ್ಥಾನಗಳ ಶಿಲ್ಪಾ ಕಲೆಯು ಒಂದೊಂದು ರೀತಿಯಲ್ಲಿದೆ. ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ ನಮ್ಮ ಸಂಸ್ಕೃತಿ ನಾಶ ಮಾಡಲು ಅನ್ಯಧರ್ಮಿಯರು ನಿರಂತರವಾಗಿ ದಾಳಿ ನಡೆಸಿದರು. ಈ ದಬ್ಬಾಳಿಕೆ ಇಂದಿಗೂ ಮುಂದುವರೆದಿದ್ದು, ಮಂದಿರಗಳನ್ನು ಸರ್ಕಾರದ ವಶದಲ್ಲಿಟ್ಟುಕೊಳ್ಳುವ ಮೂಲಕ ದೇವಸ್ಥಾನಗಳಿಗೆ ಬರುವ ಆದಾಯ ಸರ್ಕಾರದ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳು ಮಾತ್ರವಲ್ಲ ಸಾಮಾಜಿಕ ಕೇಂದ್ರವು ಸಹ ಆಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 34 ಸಾವಿರ ದೇವಸ್ಥಾನಗಳಿದ್ದು, ಇವೆಲ್ಲಾ ಸರ್ಕಾರದ ಅಡಿಯಿಲ್ಲಿದೆ. ಬಹುತೇಕ ದೇವಸ್ಥಾನಗಳಿಗೆ ಸರ್ಕಾರ ಯಾವುದೆ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ. ಕೆಲವು ದೇವಸ್ಥಾನಗಳಿಗೆ ಭಕ್ತರು ಹರಕೆ ರೂಪದಲ್ಲಿ ನೀಡಿದ ಗೋವುಗಳನ್ನು ಅಲ್ಲಿನ ಅಧಿಕಾರಿಗಳು ಕಸಾಯಿಖಾನೆಗಳಿಗೆ ಮಾರಾಟ ಮಾಡಿರುವ ಉದಾಹರಣೆ ಇದೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಹಿಂದು ದೇವಸ್ಥಾನಗಳ ಜಾಗವನ್ನು ಸಹ ಕಬಳಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ದೇವಸ್ಥಾನಗಳ ಮೇಲೆ ಮಾಡುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಕರ್ನಾಟಕ ಮಂದಿರ ಮಹಾಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಸಂಘದ ವತಿಯಿಂದ ಮಂದಿರಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಹೊರತರಲು ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಭಾಸ್ಕರ್ ನಾಯ್ಡು, ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ದುಲ್‌ರಾಜ್, ಕಾರ್ಯದರ್ಶಿ ಮಂಜುನಾಥ್ ಹತ್ವಾರ್, ಸಂಘಟನೆಯ ಮುಖಂಡ ಮೋಹನ್‌ಗೌಡ, ಮಂಜುನಾಥ್ ಸೇರಿದಂತೆ ಇತರರಿದ್ದರು.