ಮಂಡ್ಯ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ಹಾಗೂ ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆ ಮಾಡುವಂತೆ ಘೋಷಣೆ ಕೂಗಿದರು.
ಶೇಖ್ ಹಸೀನಾ ಅವರ ಪದಚ್ಯುತಿ ನಂತರವೂ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿ ಮುಂದುವರೆದಿರುವುದನ್ನು ಖಂಡಿಸಿ ಅಲ್ಲಿನ ಲಕ್ಷಾಂತರ ಹಿಂದುಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ತುರ್ತಾಗಿ ಅವರ ರಕ್ಷಣೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಆ.5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205ಕ್ಕೂ ಹೆಚ್ಚು ದಾಳಿ ನಡೆದಿದೆ. ಇದರಿಂದಾಗಿ ನೂರಾರು ಹಿಂದುಗಳು ಗಾಯಗೊಂಡಿದ್ದಾರೆ. ಹಲವಾರು ಹಿಂದು ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ. ಇಬ್ಬರು ನಾಯಕರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣ ವಿಚಾರಣೆ ಮಾಡಲು ವಿಶೇಷ ನ್ಯಾಯಮಂಡಳಿಗಳ ರಚನೆಯಾಗಬೇಕು. ಬಾಂಗ್ಲಾದೇಶದಿಂದ ನುಸುಳಿಕೊಂಡು ಬಂದು ಮಂಡ್ಯ ನೆಲದಲ್ಲಿ ಸಾವಿರಾರು ಜನರಿದ್ದಾರೆ. ಅವರನ್ನು ಗುರುತಿಸಿ ಮತ್ತೆ ಅವರನ್ನು ಬಾಂಗ್ಲಾದೇಶಕ್ಕೆ ಕಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಪಾದು, ಸೃಜನ್, ಬಾಲು, ದೊಡ್ಡಚಾರ್, ರವಿ, ಪುನೀತ್, ಭೀಮೇಶ್, ಮಂಜು, ಎಚ್.ಆರ್.ಅರವಿಂದ್, ವಿವೇಕ್, ವಸಂತ್, ಹೊಸಹಳ್ಳಿಶಿವು, ಮಾದರಾಜೇಅರಸ್, ನಂದೀಶ್, ಎಲ್ಲೆಗೌಡ, ಪುಟ್ಟಸ್ವಾಮಿ, ಜವರೇಗೌಡ ಇತರರಿದ್ದರು.