ಜಿಲ್ಲೆ

ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ, ಸರ್ಕಾರದ ಅಸಡ್ಡೆಗೆ ಹಿಂದು ಸಂಘಟನೆಗಳ ಆಕ್ರೋಶ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಸೊಣಗಾನಹಳ್ಳಿಯಲ್ಲಿ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ಭಜರಂಗದಳದ ಕಾರ್ಯಕರ್ತರು ರಕ್ಷಿಸಿದ್ದಾರೆ.
ತಡೆದು ನಿಲ್ಲಿಸಿದಾಗ ವಾಹನದಲ್ಲಿ  ಹಸು ಮತ್ತು ಎಮ್ಮೆಗಳನ್ನು ಮನಸ್ಸಿಗೆ ಬಂದಂತೆ ಕಟ್ಟಲಾಗಿತ್ತು. ಇದಕ್ಕೆ ಬಜರಂಗ ದಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಗೋವುಗಳನ್ನು ಗುಡಿಬಂಡೆ ತಾಲ್ಲೂಕಿನ ನಡುವನಹಳ್ಳಿ ಸಮೀಪದ ನಮ್ಮನಾಡು ಗೋಶಾಲೆಯ ಸುಪರ್ದಿಗೆ ಕೊಟ್ಟು ಪಾಲನೆ ಮಾಡಲಾಗುತ್ತಿದೆ. ಬಜರಂಗದಳದ ಜಿಲ್ಲಾ ಸಂಚಾಲಕ ಗರುಡಾಚಾರ್ಲಹಳ್ಳಿ ಅಮರೇಶ್ ಮಾತನಾಡಿ, ಜಿಲ್ಲಾದ್ಯಂತ ರಾಜಾರೋಷವಾಗಿ ಕಸಾಯಿಕಾನೆಗೆ ಗೋವುಗಳನ್ನು ಸಾಗಿಸುತ್ತಿದ್ದರು ಸಂಬಂಧಿಸಿದ ಇಲಾಖೆಯವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದೇ ಏ.10 ರಂದು ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19 ಗೋವುಗಳನ್ನು ರಕ್ಷಣೆ ಮಾಡಿದ್ದೆವು. ಇದೀಗ ೩೮ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ತಪಾಸಣೆಗೆ ಅಗತ್ಯವಿರುವೆಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಗೋ ಮಾಂಸ ಮಾರಾಟ ನಿಷೇಧವಿದ್ದರೂ ಸಹ ರಾಜಾರೋಷವಾಗಿ ಗೋಹತ್ಯೆ ಮಾಡಿ ಗೋಮಾಂಸ ಮಾರಲಾಗುತ್ತಿದೆ. ಈ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಗೋವಿನ ಹಂತಕರಿಗೆ ಕಾನೂನಿನಂತೆ ಕಠಿಣ ಶಿಕ್ಷೆ ಕೊಟ್ಟರೇ ಮಾತ್ರ ಗೋ ಹತ್ಯೆ ನಿಲ್ಲುತ್ತದೆ. ಕೂಡಲೇ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದರು.
ಒಂದು ವೇಳೆ ನಿರ್ಲಕ್ಷ್ಯ ಮುಂದುವರೆದರೆ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಸಂಘಟನೆಗಳ ನೇತೃತ್ವದಲ್ಲಿ  ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ತಾಲ್ಲೂಕು ಉಪಾಧ್ಯಕ್ಷ ಲಕ್ಷ್ಮೀ ಸಾಗರ ಸಂತೋಷ್, ಭಜರಂಗದಳ ಸಂಯೋಜಕ ಗಗನ್, ಸಹ ಸಂಯೋಜಕ ರಾಹುಲ್, ಮಿಟ್ಟೇಮರಿ ಬಿಜೆಪಿ ಸತೀಶ್, ಬಾಗೇಪಲ್ಲಿ ನಗರ ಸಂಯೋಜಕ ಕಲ್ಯಾಣ್ ಮತ್ತಿತರರು ಇದ್ದರು