ಚಳ್ಳಕೆರೆ: ಮದೀನ ಮಸೀದಿ ಸಮೀಪದ ಗಾಂಧಿನಗರ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಿರುವ ಸರ್ವಧರ್ಮ ಗಣಪತಿ ಮಹೋತ್ಸವ ರಾಜ್ಯಕ್ಕೆ ಮಾದರಿ ಆಗಿದೆ ಎಂದು ಹೊಯ್ಸಳ ಸಾಮಾಜಿಕ ರಕ್ಷಣಾ ಸಮಿತಿ ಅಧ್ಯಕ್ಷ, ನಗರಸಭಾ ಸದಸ್ಯ ಹೊಯ್ಸಳ ಗೋವಿಂದ ಹೇಳಿದರು.
ಬುಧವಾರ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, 20 ವರ್ಷದಿಂದ ಹಿಂದು-ಮುಸ್ಲಿಮರು ಒಗ್ಗೂಡಿ ಆಯೋಜಿಸಿಕೊಂಡು ಬರುತ್ತಿರುವ ಉತ್ಸವ ಸೌಹರ್ದ ಸಂಕೇತವಾಗಿದೆ ಎಂದರು.
ನಮಾಜ್ ಸಲ್ಲಿಸಲು ಮಸೀದಿಗೆ ಬರುವ ಮುಸ್ಲಿಮರು, ಪ್ರತಿದಿನ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಜಾತ್ಯತೀತ ಮನೋಭಾವನೆ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಅ.1ಕ್ಕೆ ವಿಸರ್ಜನೆ: 13 ದಿನಗಳ ಪೂಜಾ ಕಾರ್ಯಕ್ರಮ ನೆರವೇರಿಸಿದ ಬಳಿಕ ಅ.1ರಂದು ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಬೆಂಗಳೂರು, ಉಡುಪಿ, ಕುಂದಾಪುರ ಭಾಗದಿಂದ ವಿವಿಧ ಕಲಾ ತಂಡಗಳನ್ನು ಕರೆಸಲಾಗುವುದು. ಸಾರ್ವಜನಿಕವಾಗಿ ಯಾವುದೇ ತೊಂದರೆ ಆಗದ ರೀತಿ ಹಿಂದು-ಮುಸ್ಲಿಮರು ಒಗ್ಗೂಡಿ ಮೆರವಣಿಗೆ ನಡೆಸಿ, ಗಣಪತಿ ವಿಸರ್ಜನೆ ನಡೆಸುವುದು ಬಹಳ ವಿಶೇಷ ಎಂದರು.
ಅನುಮತಿ: ಪಾವಗಡ ರಸ್ತೆ ತಿಮ್ಮಪ್ಪ ದೇವಸ್ಥಾನ ಆವರಣ, ಗಾಂಧಿನಗರ ಮಾರಮ್ಮನ ಗುಡಿ ಸಮೀಪ, ಬಿಇಒ ಕಚೇರಿ ಆವರಣ, ಅಂಬೇಡ್ಕರ್ ನಗರ, ಕೆಇಬಿ ಕಚೇರಿ ಆವರಣ, ಜನ್ನೇನಹಳ್ಳಿ ಕಪಿಲೆ, ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶ್ವರ ನಗರ ಶಾಲೆ, ಕೆಎಸ್‌ಆರ್‌ಟಿಸಿ ನಿಲ್ದಾಣ ಆವರಣ, ಗಾಂಧಿನಗರ ಭಜನಾ ಮಂದಿರ, ನಗರಂಗೆರೆ, ಸಾಣೀಕೆರೆ ಎ.ಕೆ.ಕಾಲನಿ, ಜಡೇಕುಂಟೆ, ನಗರಂಗೆರೆ ಅಂಬೇಡ್ಕರ್ ಭವನ, ನಾರಾಯಣಪುರ ಗ್ರಾಮದಲ್ಲಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಎಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.