ಚಿತ್ರದುರ್ಗ: ರಾಜ್ಯದಲ್ಲೇ ಮನೆಮಾತಾಗಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಮಹೋತ್ಸವ 2023ರ ಅಂಗವಾಗಿ ಭಾನುವಾರ ಭೂಮಿ, ಭಗವಧ್ವಜ, ಗೋಪೂಜೆ ಮೂಲಕ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಿತು.
ಪ್ರತಿ ವರ್ಷದಂತೆ ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಮಹೋತ್ಸವ ನಡೆಯಲಿದೆ. ಪಂಚಾಚಾರ್ಯ ಕಲ್ಯಾಣ ಮಂಟಪ ಸಮೀಪದ ಜೈನ್‌ಧಾಮದಲ್ಲಿ ಭವ್ಯ ಮಂಟಪ ನಿರ್ಮಾಣವಾಗಲಿದ್ದು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ ಪೂಜೆ ನೆರವೇರಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಮಾತನಾಡಿ, ಹಿಂದು ಮಹಾಗಣಪತಿ ಶೋಭಾಯಾತ್ರೆಯೂ ಸಾಮಾಜಿಕ ಸಾಮರಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಲಕ್ಷಾಂತರ ಜನ ಭಾಗವಹಿಸುವ ಮೂಲಕ ದೇಶದಲ್ಲೇ ಅತೀ ಹೆಚ್ಚು ಮಂದಿ ಸೇರುವ ಎರಡನೇ ಗಣೇಶ ಎಂಬ ಖ್ಯಾತಿ ಪಡೆದಿದೆ ಎಂದು ತಿಳಿಸಿದರು.
2006ರಿಂದ ಚಿತ್ರದುರ್ಗದಲ್ಲಿ ಈ ಮಹೋತ್ಸವ ಆರಂಭವಾಯಿತು. ಈವರೆಗೂ ವಿವಿಧ ಶೈಲಿಯ ಮಹಾಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಈ ಬಾರಿಯೂ ಅತ್ಯಂತ ಆಕರ್ಷಣೀಯವಾಗಿ ಇರಲಿದೆ. ಸೆ. 18ರಂದು ವಿಘ್ನನಿವಾರಕ ವಿನಾಯಕ ಮಂಟಪದಲ್ಲಿ ಕಂಗೊಳಿಸಿ, ಭಕ್ತರನ್ನು ಆಶೀರ್ವದಿಸಲಿದ್ದಾನೆ ಎಂದರು.
ಮಹೋತ್ಸವ ಸುಗಮವಾಗಿ ನಡೆಯಲಿ ಎಂದು ಭಗವಂತನಲ್ಲಿ ಸಂಘಟಕರು ಪ್ರಾರ್ಥನೆ ಸಲ್ಲಿಸಿದರು. ಎಂಎಲ್ಸಿ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಮಾಜಿ ಸದಸ್ಯರಾದ ರೇಖಾ, ತಿಪ್ಪೇಸ್ವಾಮಿ, ಸಂಘಟಕರಾದ ಶರಣ್‌ಕುಮಾರ್, ಷಡಕ್ಷರಪ್ಪ, ರುದ್ರೇಶ್, ಕೇಶವ್, ಸಂದೀಪ್, ಪ್ರಶಾಂತ್, ಓಂಕಾರ್, ಸಿದ್ದಾಪುರದ ಪರಮೇಶ್, ಅಶೋಕ್, ಶ್ರೀನಿವಾಸ್, ರಂಗಸ್ವಾಮಿ, ಶಶಿಧರ್, ಶ್ರೀನಿವಾಸ್ ಡೈರಿ, ನವೀನ್ ಚಾಲುಕ್ಯ, ಸುರೇಶ್, ಪ್ರಶಾಂತ್, ವಿಫುಲ್ ಜೈನ್ ಇತರರಿದ್ದರು.