ಬೆಂಗಳೂರು: ಕರ್ನಾಟಕ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಯಲ್ಲಿ ಕಡಿಮೆ ಆದಾಯವುಳ್ಳ ಮುಸ್ಲಿಂ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಹಾಗೂ ಗ್ರಾಮೀಣ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯ ಸರ್ಕಾರವು ಶಿಕ್ಷಣದಲ್ಲಿ ತಾರತಮ್ಯದ ನೀತಿ ಅನುಸರಿಸುತ್ತಿದೆ ಎಂದು ಹಿಂದು ಜನಜಾಗೃತಿ ಸಮಿತಿ ಆರೋಪಿಸಿದೆ.
ಕುರಿತು ಉಲ್ಲೇಖ ಮಾಡಿರುವುದು ಹಿಂದೂ ಸಮಾಜದ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ. ರಾಜ್ಯದಲ್ಲಿ ಬಡವರು ಕೇವಲ ಮುಸ್ಲಿಂ ಸಮುದಾಯದಲ್ಲಿ ಇರುವುದಿಲ್ಲ. ಹಿಂದು ಸಮಾಜದಲ್ಲಿಯೂ ಅಸಂಖ್ಯ ಬಡ ಕುಟುಂಬಗಳಿದ್ದು, ಹಿಂದುಳಿದ ವರ್ಗಗಳು, ಗ್ರಾಮೀಣ ಬಡ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಹೋರಾಡುತ್ತಿದ್ದಾರೆ. ಇಂತಹವರಿಗೆ ಆರ್ಥಿಕ ಬೆಂಬಲ ನೀಡದೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡುವುದು ಒಂದು ಧರ್ಮದ ಪರ ಓಲೈಕೆ ಹಾಗೂ ಮತಬ್ಯಾಂಕ್ ರಾಜಕಾರಣವಾಗಿದೆ ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ದೂರಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ನಿರ್ಲಕ್ಷಿಸಿ, ತನ್ನದೇ ಪ್ರತ್ಯೇಕ ಎಸ್‌ಇಪಿ ರೂಪಿಸುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಮಾತ್ರ ವಿಶೇಷ ಸೌಲಭ್ಯ ನೀಡಲು ಹೊರಟಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ಭೇದ-ಭಾವ ಮಾಡದೆ ಸಮಾಜದ ಎಲ್ಲ ಬಡ ವಿದ್ಯಾರ್ಥಿಗಳಿಗೆ ಧರ್ಮ, ಜಾತಿ, ಪಂಥದ ಭೇದವಿಲ್ಲದೆ ಸಮಾನ ಆರ್ಥಿಕ ಬೆಂಬಲ ನೀಡಬೇಕು. ಒಂದು ಸಮುದಾಯವನ್ನು ಓಲೈಕೆ ಮಾಡುವ ಎಸ್‌ಇಪಿ ಹಿಂಪಡೆದು ಹಾಲಿ ಎನ್‌ಇಪಿಯನ್ನೇ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.