ಜಿಲ್ಲೆ

ಹಿಂದೂಗಳ ಮೇಲೆ ಹಲ್ಲೆಗೆ ಖಂಡನೆ

ಕಲಬುರಗಿ: ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದಲ್ಲಿ ಒಂದು ಸಮುದಾಯದ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳು ಮತ್ತು ಅವರ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲೆ ನಡೆಸಿದ ಹಲ್ಲೆ ಘಟನೆ ಖಂಡಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ಒಂದು ಕೋಮಿನವರು ತಲ್ವಾರ್ ಹಿಡಿದು ಪಾಲ್ಗೊಂಡಿದ್ದರು. ಈ ಕುರಿತು ಸಮಗ್ರ ತನಿಖೆಯಾಗಬೇಕು. ಆದರೆ ಈ ಘಟನೆ ಹಗುರವಾಗಿ ಪರಿಗಣಿಸುತ್ತಿರುವುದು ನಾಚಿಕೆಗೇಡು. ಗಲಾಟೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ಅಮಾನವೀಯ ಎಂದರು.

ಮಂತ್ರಿಗಳು ಉಡಾಫೆ ಉತ್ತರ ನೀಡಿ ಕಾಲಹರಣ ಮಾಡುತ್ತಿರುವುದು ಖಂಡನೀಯ. ಈ ಪ್ರಕರಣ ಕುರಿತು ತನಿಖೆಯಾಗಬೇಕು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಶಶಿಕಾಂತ್ ದೀಕ್ಷಿತ್, ಶಂಕರ ಚೊಕಾ, ಸಂತೋಷ ಸೊನಾವಣೆ, ಸುನೀಲ್ ರಾಠೋಡ್, ದಶರಥ ಇಂಗೋಳೆ, ರಾಜು ಕಮಲಾಪುರೆ, ಸಂಗು ಕಾಳನೂರು, ಪ್ರಕಾಶ ವಾಘ್ಮೋರೆ, ಸೋನಾಕ್ಷಿ ಇತರರು ಇದ್ದರು.