ಬೆಂಗಳೂರು: ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ಸಾಧಿಸಲು ಸಾಧ್ಯ ಎಂದು ಯುವ ಬ್ರಿಗೇಡ್‌ನ ಚಕ್ರವತಿ ಸೂಲಿಬೆಲೆ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ ನಗರದ ಮಾನಂದಿ ನಂಜುಂಡಿ ಸೆಟ್ಟಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ದೇಶ ವಿರೋಧಿ ಷಡ್ಯಂತ್ರ ಹಾಗೂ ಅರ್ಬನ್ ನಕ್ಸಲ್ ವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರ್ಬನ್ ನಕ್ಸಲ್ ವಾದಿಗಳಿಗೆ ಸರಕಾರೇತರ ಸಂಸ್ಥೆಗಳಿಂದ ಅಸೀಮಿತ ಹಣ ಪೂರೈಸಲಾಗುತ್ತಿದೆ. ಜೊತೆಗೆ ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ನೀಡುವುದರಿಂದ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತವೆ. ಈ ನಕ್ಸಲ್ ವಾದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿಶ್ವವಿದ್ಯಾಲಯಗಳು ಸಹಕರಿಸುತ್ತಿವೆ. ಅಮೆರಿಕಾ ತನ್ನ ರಾಯಭಾರಿಗಳನ್ನು ಸಹ ಇಂತಹ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ ಎಂದರು.
ಭಾರತದ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು ಎಂದು ಹೇಳುತ್ತ ಗೌರಿ ಲಂಕೇಶ್ ಯಾರೆಂದೇ ತಿಳಿಯದ ವಿದೇಶಿ ಜನರು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಇದು ಸಹ ಈ ಅರ್ಬನ್ ನಕ್ಸಲ್ ವಾದದ ಹಿಡೆನ್ ಅಜೆಂಡವಾಗಿದೆ. ಇನ್ನು ಭಾರತಕ್ಕೆ ನಕ್ಸ್‌ಲ್ ವಾದಿಗಳ ಆಕ್ರಮ ಇದು ಮೊದಲೇನಲ್ಲ. ಹಿಂದೆಯೂ ಅನೇಕ ಆಕ್ರಮಣಗಳು ನಡೆದಿವೆ, ಅದರಲ್ಲಿ ಜಯ ಸಾಧಿಸಿದ್ದೇವೆ, ಇಲ್ಲಿಯೂ ನಾವೆಲ್ಲರೂ ಸಂಘಟಿತರಾಗಿ ಹೋರಾಡಿದರೆ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆ ಎಂದು ಹೇಳಿದರು.
ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಪ್ರಚಾರ: ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗವೀರ ಮಾತನಾಡಿ, ಇಂದು ಸಾಮಾಜಿಕ ಜಾಲತಾಣ, ಓಟಿಟಿ, ಚಲನಚಿತ್ರಗಳಲ್ಲಿ ವ್ಯಾಪಕಾಗಿ ಅರ್ಬನ್ ನಕ್ಸಲ್ ವಾದ ಹರಡಲಾಗುತ್ತಿದೆ. ಇತಿಹಾಸವನ್ನೇ ತಿರುಚಿ ತೋರಿಸಲಾಗುತ್ತಿದೆ. ಜೊತೆಗೆ ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ನರೆಟಿವ್‌ಗಳನ್ನು ಸೆಟ್ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಪ್ರಕಾರ ನಕ್ಸಲರಿಂದ ಪೊಲೀಸರು, ಹಿಂದೂ ಸಂಘಟನಾಕಾರರನ್ನೂ ಒಳಗೊಂಡಂತೆ 14,000ಕ್ಕೂ ಅಧಿಕ ಜನರ ಹತ್ಯೆಯಾಗಿದೆ. ಆದರೆ ಇದರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಎಕೋಸಿಸ್ಟಮ್‌ನ ಶಕ್ತಿ ಹೆಚ್ಚಿಸಿ: ಅದೇ ಬುದ್ಧಿಜೀವಿಗಳಾದ ದಾಭೋಲ್ಕರ್, ಪಾನಸರೆ, ಕಲಬುರ್ಗಿ, ಗೌರಿ ಲಂಕೇಶ ಇವರ ಹತ್ಯೆಗಳಾದಾಗ ದೇಶದಾದ್ಯಂತ ಇದರ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಅರ್ಬನ್ ನಕ್ಸಲ್ ವಾದದ ಷಡ್ಯಂತ್ರವಾಗಿದೆ. ಇತ್ತೀಚೆಗೆ ಐಸಿ 814 ಕಂದಾಹಾರ ಹೈಜ್ಯಾಕ್ ವೆಬ್ ಸಿರೀಸ್ ನಲ್ಲಿ ಆ ವಿಮಾನವನ್ನು ಹಿಂದೂಗಳು ಹೈಜ್ಯಾಕ್ ಮಾಡಿದ್ದರು ಎಂದು ತಿರುಚಿ ತೋರಿಸಲಾಗಿದ್ದು ಅಷ್ಟೇ ಅಲ್ಲದೆ ಇಡೀ ಸಿರೀಸ್ ನಲ್ಲಿ ಇನ್ನೂ ಅನೇಕ ಕಡೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ರೀತಿ ವಿವಿಧ ಮಾಧ್ಯಮಗಳಿಂದ ಲ್‌ಟೆ ಎಕೋಸಿಸ್ಟಮ್ ಬಲಗೊಳ್ಳುತ್ತಿದ್ದು ಅದನ್ನು ಕೊನೆಗಾಣಿಸಲು ನಾವು ಹಿಂದೂ ಎಕೋಸಿಸ್ಟಮ್ ನ ಶಕ್ತಿ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕೈಕಟ್ಟಿ ಕೂತರೆ ಆಗದು: ಮಹಾಭಾರತ ಕಾಲದಿಂದಲೂ ಈ ದೇಶದಲ್ಲಿ ಧರ್ಮ-ಅಧರ್ಮದ ನಡುವೆ ಸಂಘರ್ಷ ನಡೆಯುತ್ತಿದೆ. ಅಲ್ಲಿಯೂ ಕಪಟ ನೀತಿಯಿಂದ ಪಾಂಡವರ ಪರಾಜಯಕ್ಕೆ ಪ್ರಯತ್ನಿಸಲಾಗುತ್ತಿತ್ತು, ಆದರೆ ಭಗವಾನ್ ಶ್ರೀ ಕೃಷ್ಣನ ಕೃಪೆ ಮತ್ತು ಧರ್ಮವೀರರ ಸಂಘಟಿತ ಹೋರಾಟದಿಂದ ಧರ್ಮದ ವಿಜಯವಾಯಿತು. ಈಗಲೂ ಅರ್ಬನ್ ನಕ್ಸಲ್ ವಾದದಂತಹ ವೈಚಾರಿಕ ಯುದ್ಧ ನಡೆಯುತ್ತಿದೆ. ಜನತೆ ಧರ್ಮದ ಜಯವಾಗುವುದು ಎಂದು ತಮ್ಮಷ್ಟಕ್ಕೆ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಎಲ್ಲರೂ ಸಂಘಟಿತರಾಗಬೇಕು ಎಂದು ಚಿಂತಕಿ ಡಾ. ಎಸ್. ಆರ್. ಲೀಲಾ ಮಾತನಾಡಿ ಕರೆ ನೀಡಿದರು.