ಸಿಂದಗಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿದರು. ಮಾಜಿ ಶಾಸಕ ರಮೇಶ ಭೂಸನೂರ, ಅಶೋಕ ಅಲ್ಲಾಪೂರ, ಸಂತೋಷ ಪಾಟೀಲ ಇತರರಿದ್ದರು.  
ಜಿಲ್ಲೆ

ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದು ತುಷ್ಟೀಕರಣ

ಸಿಂದಗಿ: ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿರುವ ಮುಸ್ಲಿಮರಿಂದಲೇ ಸರ್ಕಾರ ನಡೆಯುತ್ತಿದೆ ಎಂದು ಭಾವಿಸಿದಂತಿದೆ. ಅಂತೆಯೇ ಬಜೆಟ್‌ನಲ್ಲಿ ಅವರಿಗೆ ವಿದ್ಯಾರ್ಥಿ ವೇತನ, ವಿವಾಹಕ್ಕಾಗಿ ಧನ ಸಹಾಯ ಸೇರಿ ಗುತ್ತಿಗೆ ಕಾಮಗಾರಿಗಳಲ್ಲೂ ಶೇ.4 ರಷ್ಟು ಮೀಸಲಾತಿ ನೀಡುವ ಮೂಲಕ ಹಿಂದು ತುಷ್ಟೀಕರಣ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ ಆರೋಪಿಸಿದರು.

ಪಟ್ಟಣದ ಮಾಜಿ ಶಾಸಕ ರಮೇಶ ಭೂಸನೂರ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಕಾಂಗ್ರೆಸ್ ಸರ್ಕಾರದ ರೈತ ಹಾಗೂ ಜನ ವಿರೋಧಿ ನೀತಿ ಖಂಡಿಸಿದರು.

ಬೊಮ್ಮಾಯಿ ಸರ್ಕಾರ ಎಲ್ಲ ವರ್ಗದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಎನ್.ಜಿ.ಒ ಮೂಲಕ ವಿವಾಹಕ್ಕಾಗಿ 50 ಸಾವಿರ ರೂ. ನೀಡಿದ್ದಾರೆ. ಅಂದು ಡಾ.ಬಿ.ಆರ್. ಅಂಬೇಡ್ಕರರು ದೇಶ ವಿಭಜನೆ ಸಂದರ್ಭ ಪಾಕಿಸ್ತಾನದಲ್ಲಿಯ ಹಿಂದುಗಳು ಭಾರತಕ್ಕೆ, ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಗಾಂಧೀಜಿ ಮತ್ತು ನೆಹರೂ ಅವರಿಗೆ ಪ್ರತಿರೋಧ ಒಡ್ಡಿದ್ದರು. ಇಂದಿಗೂ ಅದನ್ನೇ ಮುಂದುವರಿಸಿಕೊಂಡು ಬಂದಿರುವ ಕಾಂಗ್ರೆಸ್ ತನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕು. ಜಾತಿವಾರು ಸವಲತ್ತುಗಳನ್ನು ಎಲ್ಲ ವರ್ಗದವರಿಗೂ ಕೊಡಬೇಕು. ಇಲ್ಲ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಹಿಂಪಡೆಯಬೇಕೆಂದು ಆಗ್ರಹಿಸಿದರು.

18 ಶಾಸಕರನ್ನು ಅಮಾನತ್ತಿಲ್ಲಿಟ್ಟಿರುವುದು ಇದೇ ಮೊದಲು. ಈ ಕ್ರಮಕ್ಕೆ ಮುಂದಾಗಿರುವುದು ಸ್ಪೀಕರ್ ನಿರ್ಧಾರವೋ? ಅಥವಾ ಮತ್ಯಾರದ್ದೋ ಎಂದು ಸ್ಪಷ್ಟಪಡಿಸಬೇಕು. ಹನಿಟ್ರಾೃಪ್ ತನಿಖೆ ಹೈಕೋರ್ಟ್ ಜಡ್ಜ್ ಅಥವಾ ಸಿಬಿಐಗೆ ವಹಿಸಬೇಕು. ಅಮಾನತು ಕ್ರಮ ವಾಪಸ್ ಪಡೆಯಬೇಕೆಂದರಲ್ಲದೆ, ಈಗ ಬೇಸಿಗೆ ಇದ್ದು, ರಾಜ್ಯದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆಯಬೇಕೆಂದು ಆಗ್ರಹಿಸಿದರು.

ಬಜೆಟ್‌ನಲ್ಲಿ ಯುಕೆಪಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದೆ. ಆದರೆ, ಬರಿಗೈಯಲ್ಲಿ ಸರ್ಕಾರ ಇದನ್ನು ಹೇಗೆ ಪೂರ್ಣಗೊಳಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಸರ್ಕಾರವೇ ರೈತರಿಗೆ ತೊಗರಿ ಬೀಜ ಪೂರೈಸಿತ್ತು. ರಾಜ್ಯದಲ್ಲಿ ಅಂದಾಜು 12 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ ಬಿತ್ತನೆ ಮಾಡಿ ಫಲ ಬಾರದೆ ಕೈಸುಟ್ಟುಕೊಂಡಿದ್ದಾರೆ. ಹಿಂದೆ ಬಿಜೆಪಿ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಶಾಸಕರು ಹೋರಾಟ ನಡೆಸಿ, ತಲಾ ಎಕರೆವಾರು 25 ಸಾವಿರ ರೂ. ಪರಿಹಾರಕ್ಕೆ ಆಗ್ರಹಿಸಿದ್ದರು. ಈಗ ಅವರದ್ದೇ ಸರ್ಕಾರವಿದ್ದು, ಅದೇ ಪರಿಹಾರವನ್ನೂ ನೀಡಲಿ ಎಂದು ಒತ್ತಾಯಿಸಿದರು.

ಮೂರು ದಶಕಗಳ ಭವಿಷ್ಯದ ಯೋಜನೆ ಜೆಜೆಎಂ ಕಾಮಗಾರಿ ಕೆಲವೆಡೆ ಕಳಪೆಯಾಗಿದ್ದು, ಗುಣಮಟ್ಟದ ಪೈಪ್ ಹಾಕಿಲ್ಲ. ನೀರಿನ ಮೂಲ ಗುರುತಿಸಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ, ಸದನ ವಿರೋಧಿ, ರೈತ ಹಾಗೂ ಹಿಂದು ವಿರೋಧಿ ನಿಲುವು ಖಂಡಿ ಮಾ. 26 ರಿಂದ ಒಂದು ವಾರದವರೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ಮಾಜಿ ಶಾಸಕ ರಮೇಶ ಭೂಸನೂರ, ಲಿಂಬೆ ನಿಗಮ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕೇಂದ್ರ ಸರ್ಕಾರ ನೀಡುತ್ತಿರುವ ತೊಗರಿ ಬೆಲೆ 7550 ರೂ. ಮಾತ್ರ ರೈತರಿಗೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಬೆಂಬಲ ಬೆಲೆಯಾಗಿ 450 ರೂ.ಗಳನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿದರು.

ಮಂಡಲ ಅಧ್ಯಕ್ಷ ಸಂತೋಷ ಪಾಟೀಲ, ಬಿ.ಎಚ್. ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಸಿದ್ದರಾಮ ಆನಗೊಂಡ, ಗುರು ತಳವಾರ, ಪ್ರಶಾಂತ ಕದ್ದರಕಿ, ಎಸ್.ಎನ್. ಹಿರೇಮಠ ಮತ್ತಿತರರಿದ್ದರು.