ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆಂದು ಆರೋಪಿಸಿ ಹಿಂದು ಕಾರ್ಯಕರ್ತರು ನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ವ್ಯಕ್ತಿಯೊಬ್ಬನಿಗೆ ಮುಖವಾಡ ಹಾಕಿಸಿ ‘ನಾನು ಅನಾಮಿಕ(ಭೀಮ), ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡುವುದು’ ಎಂದು ಬರೆಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿಸಲಾಯಿತು. ಅಂತೆಯೇ ರಕ್ತದಲ್ಲಿ ಹೆಬ್ಬೆಟ್ಟು ಹಾಕಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕಳುಹಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದರಿಂದ ಯಾವುದೇ ಪ್ರಯೋಜನವು ಆಗುತ್ತಿಲ್ಲ. ನಮ್ಮ ಹಿಂದು ದೇವಾಲಯವಾದ ಶ್ರೀ ಕ್ಷೇತ್ರದ ಪಾವಿತ್ರೃತೆ ಮತ್ತು ಭಕ್ತರ ನಂಬಿಕೆ ವಿಶ್ವಾಸ ಎಲ್ಲವನ್ನು ಯಾರೋ ಕಿಡಿಗೇಡಿಗಳ ಮಾತನ್ನು ಕೇಳಿ ರಾಜ್ಯ ಸರ್ಕಾರ ದೇವಸ್ಥಾನಕ್ಕೆ ಕಪ್ಪುಚುಕ್ಕೆ ತಂದು ಘನತೆ ಗೌರವವನ್ನು ಹಾಳು ಮಾಡುತ್ತಿದೆ. ಮತ್ತು ಜನರ ಭಕ್ತಿ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದು ಸರಿಯಲ್ಲ. ಧರ್ಮಸ್ಥಳಕ್ಕೆ ಸುಮಾರು 800 ವರ್ಷದ ಇತಿಹಾಸವಿದೆ ಎಂದರು.
ಆದಾಗ್ಯೂ ಕೆಲವರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎನ್‌ಐಎ ತನಿಖೆಗೆ ಒಳಪಡಿಸಿ ನ್ಯಾಯ ಕೊಡಿಸಬೇಕು. ಜತೆಗೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಪಿತೂರಿ ಮಾಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಲ್ಲಿ ಮನವಿ ಮಾಡಿಕೊಂಡರು.
ಹಿಂದು ಕಾರ್ಯಕರ್ತರಾದ ಶಿವಕುಮಾರ್ ಆರಾಧ್ಯ, ಶಿವಲಿಂಗಣ್ಣ, ವರದರಾಜೇ ಅರಸ್, ಪ್ರಸನ್ನ, ಕೃಷ್ಣ, ಮಹಾಂತಪ್ಪ, ಶಿವಣ್ಣ ಇತರರಿದ್ದರು.