ನಂಜನಗೂಡು : ಬೆಂಗಳೂರು ನಗರ ವೈವಿಧ್ಯಮಯ ಭಾಷೆಗಳಿಂದ ಕೂಡಿದ ಜನರನ್ನು ಹೊಂದಿದೆ. ನಮ್ಮ ರಾಜ್ಯದ ಗಾಳಿ, ನೀರು, ಅನ್ನ ತಿನ್ನುತ್ತಿರುವ ಇವರಿಗೆ ಕನ್ನಡ ಕಲಿಸುವ ಮೂಲಕ ಭಾಷೆ ಉಳಿಸುವ ಜವಬ್ದಾರಿಯನ್ನು ಎಲ್ಲರೂ ಹೊಂದಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಕರೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಂಜನಗೂಡು ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆ ಶ್ರೇಷ್ಠವಾದ ಭಾಷೆ. 68 ವರ್ಷಗಳ ಹಿಂದೆ ದಕ್ಷಿಣ ಭಾಗದಲ್ಲಿ ಎಲ್ಲರನ್ನ ಒಗ್ಗೂಡಿಸಿ ಕರ್ನಾಟಕ ರಾಜ್ಯ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಈ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ. ರಾಜ್ಯವನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರನ್ನು ಇಂದು ನಾವು ಸ್ಮರಿಸಬೇಕು. ರಾಜ್ಯೋತ್ಸವ ಒಂದು ದಿನದ ಮಟ್ಟಿಗೆ ನಡೆಯುವ ಕಾರ್ಯಕ್ರಮ ಆಗಬಾರದು. ಪ್ರತಿದಿನವೂ ಆಚರಣೆ ಮಾಡಬೇಕು. ನಾವು ಕರ್ನಾಟಕದಲ್ಲಿ ಹುಟ್ಟಿದ್ದೆ ಒಂದು ಪುಣ್ಯ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದಿ ಭಾಷೆ ಹೇರಿಕೆ ಕಂಡುಬರುತ್ತಿದೆ. ಹಿಂದಿ ಭಾಷೆಯನ್ನು ನಾವು ಗೌರವಿಸೋಣ. ಆದರೆ ನಮ್ಮ ತಾಯಿನಾಡಿನ ಭಾಷೆಯನ್ನು ಪ್ರತಿಯೊಬ್ಬರಿಗೂ ಕಲಿಸುವ ಜವಾಬ್ದಾರಿ ನಮ್ಮದಾಗಿರಬೇಕು ಎಂದರು.
ಮುಖ್ಯ ಭಾಷಣಕಾರ ಕಬ್ಬಹಳ್ಳಿ ಪ್ರೌಢಶಾಲೆಯ ಸಿದ್ದರಾಜು ಮಾತನಾಡಿ, ನಂಜನಗೂಡು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಪರಶುರಾಮ ಹೆಜ್ಜೆ ಇಟ್ಟ ಗ್ರಾಮ ಹೆಜ್ಜಿಗೆ ಆಗಿದೆ. ಪಾಪಕ್ಕಾಗಿ ಹೋರಾಡಿದ ಊರು ಹೊರಳವಾಡಿ, ಗೋಳಾಡಿದ ಊರು ಗೋಳೂರು, ಸಂಭ್ರಮ ಪಟ್ಟಿದ್ದ ಊರು ಸರಗೂರು, ಪರಶುರಾಮ ನೃತ್ಯವಾಡಿದ ಊರು ತಾಂಡವಪುರ ಹೀಗೆ ವರ್ಣನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಕನ್ನಡ ನಾಡನ್ನು ಕಟ್ಟಲು ಹಲವು ದಿಗ್ಗಜರು ಕೊಡುಗೆ ನೀಡಿದ್ದಾರೆ. ಅಂತಹ ಪುಣ್ಯಾತ್ಮರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ. ಸೈನಿಕರು, ಕವಿಗಳು, ರೈತರು ಕನ್ನಡ ನಾಡಿನ ಆಧಾರ ಸ್ಥಂಭಗಳಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭಾಧ್ಯಕ್ಷ ಎನ್.ಶ್ರೀಕಂಠ, ಉಪಾಧ್ಯಕ್ಷೆ ರಿಯನಾ ಬಾನು, ಸದಸ್ಯರಾದ, ಮಹದೇವಪ್ಪ, ಗಾಯತ್ರಿ ಮೋಹನ್, ಕಲೀಜ್ ಅಹಮದ್, ನಾಮ ನಿರ್ದೇಶಕರಾದ ರವಿ,ಸೌಭಾಗ್ಯಾ, ಮಾರುತಿ,ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಡಿವೈಎಸ್ಪಿ ರಘು ಸೇರಿದಂತೆ ಮತ್ತಿತರರು ಇದ್ದರು.