ಜಿಲ್ಲೆ

ಹಿಂದಿ ರಾಷ್ಟ್ರದ ಹೃದಯದ ಭಾಷೆ : ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ.ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ತಾಲೂಕು ಹಿಂದಿ ಭಾಷಾ ಶಿಕ್ಷಕ ಸಂಘದ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ, ಕರ್ನಾಟಕ ಪ್ರೌಢಶಾಲಾ ಹಿಂದಿ ಶಿಕ್ಷಕ ಸಂಘ ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದೊಂದಿಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಹಿಂದಿ ದಿವಸ ಕಾರ್ಯಕ್ರಮ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿ ರಾಷ್ಟ್ರದ ಹೃದಯದ ಭಾಷೆ. ಎಲ್ಲ ಹಿಂದಿ ಭಾಷಾ ಶಿಕ್ಷಕರನ್ನು ಸಂಘಟಿಸಿಕೊಂಡು ಪ್ರತಿವರ್ಷ ಹಿಂದಿ ದಿವಸ ಆಚರಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಅಥವಾ ಇನ್ನಿತರ ಕಾರಣಗಳಿಗೆ ಹೊರರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಾಗ ಹಿಂದಿ ಭಾಷೆಯ ಅಗತ್ಯವಿದೆ. ಶಾಲೆಯಲ್ಲಿ ಪಠ್ಯದ ಜತೆಗೆ ಹಿಂದಿ ಭಾಷೆ ಕಲಿಕೆಯ ಅಭಿಯಾನವನ್ನು ಆರಂಭಿಸಿದರೆ ವಿದ್ಯಾರ್ಥಿಗಳು ವ್ಯಾಕರಣ ಬದ್ಧವಾಗಿ ಹಿಂದಿ ಮಾತನಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಹಿಂದಿರತ್ನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಮಂಚಿ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಶಾಂತ ಅವರಿಗೆ ನೀಡಲಾಯಿತು. ಸಂಘದ ವತಿಯಿಂದ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಲಾಯತು. ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿದ ಹಿಂದಿ ಶಿಕ್ಷಕರನ್ನು ಹಾಗೂ ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಅವರನ್ನು ಗೌರವಿಸಲಾಯಿತು. ಶೇ.100 ಫಲಿತಾಂಶ ಪಡೆದ ಶಾಲೆಗಳ ಹಿಂದಿ ಶಿಕ್ಷಕರನ್ನು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ಬಂಟ್ವಾಳ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ, ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಗೀತಾ, ತಾಲೂಕು ಅಧ್ಯಕ್ಷೆ ಪೌಲಿನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ.ಮಾಲತಿ ಪೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಪ್ರಾಸ್ತವಿಕ ಮಾತುಗಳೊಂದಿಗೆ, ಸ್ವಾಗತಿಸಿದರು. ಷಡಕ್ಷರಿ ವರದಿ ವಾಚಿಸಿದರು. ಶಿಕ್ಷಕಿ ದೀಪಿಕಾ ವರದಿ ವಾಚಿಸಿದರು, ಶಿಕ್ಷಕ ಇಮ್ತಿಯಾಝ್ ನಿರೂಪಿಸಿದರು.