ಜಿಲ್ಲೆ

ಹಿಂಡಲಗಾ ಜೈಲ್ ಜಾಮರ್ ಮಿತಿ ಕಡಿಮೆ ಮಾಡಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ತಾಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ ಜಾಮರ್ ಮಿತಿ ಕಡಿಮೆಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಹಿಂಡಲಗಾ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್‌ನಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದಾಗಿ ಸಂವಹನಕ್ಕೆ ತೊಂದರೆಯಾಗಿದೆ. ಈ ಹಿಂದೆ ಹೋರಾಟ ಮಾಡಿದಾಗ, ಐದಾರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಅಧಿಕಾರಿಗಳಿಂದ ಸಿಕ್ಕಿತ್ತು. ಆದರೆ, ಈವರೆಗೂ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಈ ಹಿಂದೆಯೂ ಜೈಲಿನಲ್ಲಿ ಜಾಮರ್ ಅಳವಡಿಸಲಾಗಿತ್ತು. ಆದರೆ, ಕಾರಾಗೃಹದ ಸುತ್ತಲೂ ವಾಸಿಸುವ ಜನರಿಗೆ ಇದರಿಂದ ಯಾವ ತೊಂದರೆ ಆಗಿರಲಿಲ್ಲ. ಈಗ ಜಾಮರ್ ಮಿತಿ ಹೆಚ್ಚಿಸಿದ್ದರಿಂದ ಸಮಸ್ಯೆಯಾಗಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವುದಾದರೆ, ಒಳಗೆ ಯಾವ ಮೊಬೈಲ್ ಹೋಗದಂತೆ ತಡೆಯಬೇಕು. ಅಲ್ಲಿನ ಅಕ್ರಮ ಚಟುವಟಿಕೆ ತಡೆಗಟ್ಟಬೇಕು. ಇದರ ಬದಲಿಗೆ ಊರ ಮಧ್ಯದ ಕಾರಾಗೃಹದಲ್ಲೇ ಹೆಚ್ಚಿನ ಮಿತಿ ಜಾಮರ್ ಅಳವಡಿಸಬಾರದು ಎಂದು ಆಗ್ರಹಿಸಿದರು.

ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಹಿತ್ತಲಮನಿ, ಉಪಾಧ್ಯಕ್ಷೆ ಚೇತನಾ ಅಗಸಗೇಕರ, ಸದಸ್ಯರಾದ ಡಿ.ಬಿ.ಪಾಟೀಲ, ರಾಮಚಂದ್ರ ಕುದ್ರೇಮನಿಕರ, ರಾಮಚಂದ್ರ ಮಂಡೋಳಕರ, ಪರಶುರಾಮ ಕುಗಚಿಕರ, ಯಲ್ಲಪ್ಪ ಕಾಕತಕರ, ರವಿಕುಮಾರ ಕೋಕಿತಕರ ಇತರರಿದ್ದರು.