ಕಾರವಾರ: ಹಿಮೋಫೀಲಿಯಾ ರೋಗಕ್ಕೆ ನೀಡುವ ಫ್ಯಾಕ್ಟರ್ ಔಷಧಿಗಳನ್ನು ಆಯಾ ತಾಲೂಕು ಆಸ್ಪತ್ರೆಗಳಲ್ಲಿ ದೊರಕಿಸಿಕೊಡುವಂತೆ ಜಿಲ್ಲೆಯ ಹಿಮೋಫೀಲಿಯಾ ರೋಗಿಗಳು ಮನವಿ ಮಾಡಿದ್ದಾರೆ.
ಸದ್ಯ ಶಿರಸಿಯ ಪಂಡಿತ ಜನರಲ್ ಆಸ್ಪತ್ರೆ ಹಾಗೂ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಹಿಮೋಫೀಲಿಯಾ ಸೋಂಕಿತರಿಗೆ ಫ್ಯಾಕ್ಟರ್ 6, ಫ್ಯಾಕ್ಟರ್8 ಹಾಗೂ ಫ್ಯಾಕ್ಟರ್ 9 ಔಷಧಗಳನ್ನು ನೀಡಲಾಗುತ್ತಿದೆ. ಆದರೆ, ಜೊಯಿಡಾ, ದಾಂಡೇಲಿ, ಭಟ್ಕಳ ಮುಂತಾದ ಊರುಗಳಲ್ಲಿರುವ ರೋಗಿಗಳು ಆಸ್ಪತ್ರೆಗಳಿಗೆ ತಲುಪಲು 100 ರಿಂದ 150 ಕಿಮೀ ಕ್ರಿಮಿಸಬೇಕಾಗಿದೆ. ಇದರಿಂದ ತಾಲೂಕು ಆಸ್ಪತ್ರೆಯಲ್ಲಿಯೇ ಔಷಧ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದರು. ಅಂಕವಿಕಲರ ಮತ್ತು ಪಾಲಕರ ಒಕ್ಕೂಟದ ಶ್ರೀಕಾಂತ ನಾಯ್ಕ, ಪ್ರವೀಣ ನಾಯ್ಕ ಹಾಗೂ ಇತರರು ಮನವಿ ಸಲ್ಲಿಕೆಯ ಸಂದರ್ಭದಲ್ಲಿದ್ದರು.
ಏನಿದು ಹಿಮೋಫೀಲಿಯಾ..?
ಹಿಮೋಫೀಲಿಯಾ ಒಂದು ಅನುವಂಶೀಯ ಕಾಯಿಲೆಯಾಗಿದೆ. ಕನ್ನಡದಲ್ಲಿ ಇದಕ್ಕೆ ಕುಸುಮ ರೋಗ ಎನ್ನಲಾಗುತ್ತದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ ಸಿದ್ದಾಪುರ ಭಾಗದಲ್ಲಿ ಈ ಒಟ್ಟು 12 ಜನ ರೋಗಿಗಳಿದ್ದಾರೆ. ಅವರ ರಕ್ತ ಹೆಪು÷್ಪಗಟ್ಟುವ ಗುಣ ಹೊಂದಿರುವುದಿಲ್ಲ. ಇದರಿಂದ ರಕ್ತಸ್ರಾವ ಉಂಟಾದರೆ ಅದನ್ನು ತಡೆಯಲು ಫ್ಯಾಕ್ಟರ್ ಎಂಬ ವಿದೇಶಿ ಜನ್ಯ ಇಂಜಕ್ಷನ್‌ಗಳನ್ನು ಪಡೆಯಬೇಕು. ಈ ರೋಗ ಇರುವವರು ಗಾಯ ಉಂಟಾಗುವ ಯಾವುದೇ ಘಟ್ಟಿ ಕೆಲಸ ಮಾಡುವಂತಿಲ್ಲ. ಏನಾದರೂ ಸಮಸ್ಯೆ ಉಂಟಾದಲ್ಲಿ ಅವರು ತಕ್ಷಣ ಫ್ಯಾಕ್ಟರ್ ಇಂಜಕ್ಷನ್ ಪಡೆಯಬೇಕು. ಸರ್ಕಾರ ಅವರಿಗೆ ಉಚಿತವಾಗಿ ಫ್ಯಾಕ್ಟರ್ ಇಂಜಕ್ಷನ್ ನೀಡುತ್ತದೆ. ಆದರೆ, ಅದನ್ನು ಪಡೆಯಲು ದೂರ ಓಡಾಡಬೇಕಿರುವುದು ಅವರಿಗೆ ಸಮಸ್ಯೆಯಾಗಿದೆ.