ದೇವದುರ್ಗ: ರಣ ಬಿಸಿಲಿಗೆ ಹೆಸರುವಾಸಿಯಾದ ತಾಲೂಕು ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಿಂದ ಮಲೆನಾಡಿನಂತಾಗಿದೆ.
ತಾಲೂಕಾದ್ಯಂತ ಎರಡ್ಮೂರು ದಿನಗಳಿಂದ ಮೃಗಶಿರ ಮಳೆ ಸುರಿಯುತ್ತಿದೆ. ಗಬ್ಬೂರು, ಮಸರಕಲ್, ಜಾಲಹಳ್ಳಿ, ಹೂವಿನಹೆಡಗಿ, ಜೋಳಹೆಡಗಿ, ಕೊಪ್ಪರ, ಗೂಗಲ್ ಸೇರಿ ವಿವಿಧಡೆ ಉತ್ತಮ ಮಳೆಯಾಗಿದೆ. ಬುಧವಾರ ಬೆಳಗ್ಗೆ 4 ಗಂಟೆಯಿಂದ 11ಗಂಟೆವರೆಗೆ ತುಂತುರು ಮಳೆ ಸುರಿಯಿತು.
ಪಟ್ಟಣದ ಸುತ್ತ 20ಕ್ಕೂ ಹೆಚ್ಚು ಗುಡ್ಡಗಳಿದ್ದು, ಬೆಳಗ್ಗೆ ಮಂಜಿನ ವಾತಾವರಣ ಹಾಗೂ ತುಂತುರು ಮಳೆಯಿಂದ ಯಾವುದೂ ಕಾಣದಂತಾಗಿತ್ತು. 45 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಅನುಭವಿಸಿದ್ದ ಜನರು ಇದೀಗ ತಂಪಿನ ವಾತಾವರಣದಿಂದ ಖುಷಿ ಅನುಭವಿಸುತ್ತಿದ್ದಾರೆ. ಯುವಕರು ಗುಡ್ಡದ ಮೇಲೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಕೃಷಿ ಚಟುವಟಿಕೆಗಳು ಚುರುಕು ಪಡೆದಿದ್ದು, ಹತ್ತಿ, ತೊಗರಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಒಂದು ವಾರದ ಮಟ್ಟಿಗೆ ಮಳೆ ನಿಂತರೆ ರೈತರು ಬಿತ್ತನೆ ಮಾಡಲಿದ್ದಾರೆ. ಇದೇ ರೀತಿ ಮುಂದುವರಿದರೆ ಹೊಲದಲ್ಲಿ ಕಳೆ ಬೆಳೆಯಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.