ಜಿಲ್ಲೆ

ಸಾಂಬಾರ ಬೆಳೆಗಳತ್ತ ಮಲೆನಾಡಿನ ರೈತರು ಚಿಂತಿಸಲಿ, ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಲಹೆ


ಯಲ್ಲಾಪುರ: ಕೇವಲ ಅಡಕೆಯನ್ನು ಅವಲಂಬಿಸದೇ ಸಾಂಬಾರ ಬೆಳೆಗಳನ್ನು ಬೆಳೆಯುವ ಬಗ್ಗೆ ಮಲೆನಾಡಿನ ರೈತರು ಚಿಂತಿಸಬೇಕು. ಅದಕ್ಕಾಗಿ ಸರ್ಕಾರ ನೀಡಬೇಕಾದ ಸೌಲಭ್ಯಗಳ ಬಗ್ಗೆ ರೈತರು ಸಂಘಟಿತವಾಗಿ ಸ್ಪಷ್ಟ ಧ್ವನಿ ಎತ್ತಬೇಕು ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.


ಪಟ್ಟಣದ ಗಾಂಧಿ ಕುಟೀರದಲ್ಲಿ ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿ, ತಾ.ಪಂ, ಜಿ.ಪಂ. ಆಶ್ರಯದಲ್ಲಿ ಮಲೆನಾಡು ಸುಸ್ಥಿರ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಹಾಗೂ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಬಜೆಟ್​ನಲ್ಲಿ ಮಲೆನಾಡಿನ ಸುಸ್ಥಿರ ಅಭಿವೃದ್ಧಿಗಾಗಿ ಬೇಕಾದ ಅನುದಾನವನ್ನು ಮೀಸಲಿಡಬೇಕು. ಮಲೆನಾಡಿಗೆ ದೊಡ್ಡ ಯೋಜನೆಗಳು ಬೇಡ. ನಮಗೆ ಬೇಕಿರುವುದು ಮಲೆನಾಡಿನ ಸಂರಕ್ಷಣೆ, ಅಭಿವೃದ್ಧಿಯ ಯೋಜನೆಗಳು. ಈ ಬಗ್ಗೆ ಸಂಘಟಿತ ಪ್ರಯತ್ನ ನಡೆಯಬೇಕು ಎಂದರು.
ತಾ.ಪಂ. ಆಡಳಿತಾಧಿಕಾರಿ ನಟರಾಜ.ಟಿ.ಎಚ್., ಅಧ್ಯಕ್ಷತೆ ವಹಿಸಿದ್ದರು. ಜೀವವೈವಿಧ್ಯ ನಿರ್ವಹಣಾ ಮಂಡಳಿಯ ಉಪನಿರ್ದೇಶಕಿ ಪವಿತ್ರಾ, ಬಿಇಒ ಎನ್.ಆರ್. ಹೆಗಡೆ, ಆರ್​ಎಫ್​ಒ ದಿನೇಶ ಮಿರ್ಜಾನಕರ್, ಜಿಲ್ಲಾ ಸಾವಯವ ರೈತ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಸ್. ಭಟ್ಟ ಆನಗೋಡ, ಡಾ.ಪ್ರೀತಮ್ ಶ್ರೀಪಾದ ಬಿಚ್ಚುಗತ್ತಿ, ಚಕ್ರವಾಕ ಸುಬ್ರಹ್ಮಣ್ಯ, ಆನೆಗೋಳ ಸುಬ್ಬರಾವ ಇತರರಿದ್ದರು.
ಅನಿತಾ ಹೆಗಡೆ ಪ್ರಾರ್ಥಿಸಿದರು. ತಾ.ಪಂ. ಇಒ ರಾಜೇಶ ಧನವಾಡಕರ್ ಸ್ವಾಗತಿಸಿದರು. ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ನಿರ್ವಹಿಸಿದರು. ವಿವಿಧ ಗ್ರಾ.ಪಂ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ನಡೆಯಿತು.