ಜಿಲ್ಲೆ

ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ ಪ್ರಕರಣ, ಮಣ್ಣು ತೆರವು ಕಾರ್ಯಕ್ಕೆ ಮಳೆ ಅಡ್ಡಿ

ಶಿರಸಿ: ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ಮಾರ್ಗದ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ ಸ್ಥಳವನ್ನು ತೆರವುಗೊಳಿಸುವ ಕಾರ್ಯ ಗುರುವಾರವೂ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೂ ತೊಡಕುಂಟುಮಾಡಿದೆ.
ಕಳೆದ ಮೂರು ದಿನಗಳಿಂದ ಮಣ್ಣು ತೆಗೆಯುವ ಕಾರ್ಯವನ್ನು ರಸ್ತೆ ಗುತ್ತಿಗೆದಾರ ಕಂಪನಿ ಆರ್​ಎನ್​ಎಸ್ ಹಗಲಿರುಳು ಮಾಡುತ್ತಿದೆ. ಆರ್​ಎನ್​ಎಸ್ ಇಂಜಿನಿಯರ್​ಗಳು ಮತ್ತು ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಕಾಳಜಿ ವಹಿಸಿದ್ದಾರೆ. ಆದರೆ, ರಾಗಿಹೊಸಳ್ಳಿ ಬಳಿ ಉಂಟಾದ ಭೂ ಕುಸಿತ ಗಂಭೀರ ಸ್ವರೂಪದ್ದಾಗಿದೆ. ಒಂದೆಡೆ ಮಣ್ಣು ತೆಗೆಯುತ್ತಿದ್ದಂತೆಯೇ ಇನ್ನೊಂದೆಡೆ ಕುಸಿಯಲಾರಂಭಿಸುತ್ತಿದೆ. ಅಲ್ಲದೆ, ಕಾರ್ಯಾಚರಣೆ ವೇಳೆ ಮಣ್ಣು ಕುಸಿತಗೊಂಡು ಅವಘಡ ನಡೆಯದಂತೆಯೂ ಎಚ್ಚರಿಕೆ ವಹಿಸಬೇಕಾಗಿದೆ.
ಗುರುವಾರ ಸಂಪೂರ್ಣ ದಿನ ಕೆಲಸ ಮಾಡಿದ ಬಳಿಕ ಸಂಜೆಯ ವೇಳೆಗೆ ಒಂದು ಕಾರು ದಾಟುವ ಮಾದರಿಯಲ್ಲಿ ರಸ್ತೆ ಬಿಡಿಸಲಾಗಿದೆ. ಆದರೆ, ಅದರ ಪಕ್ಕದಲ್ಲೇ ಮಣ್ಣಿನ ಬೃಹತ್ ಗುಡ್ಡೆ ಇದ್ದು, ಅದನ್ನು ತೆರವುಗೊಳಿಸುವವರೆಗೂ ವಾಹನ ಸಂಚಾರ ಸಾಧ್ಯವಿಲ್ಲ. ವಾಹನ ದಾಟುವ ವೇಳೆ ಮಣ್ಣು ಕುಸಿತಗೊಂಡರೆ ಎಂಬ ಭಯ ಸ್ಥಳೀಯರನ್ನೂ ಕಾಡಿದೆ. ಶುಕ್ರವಾರ ಸಂಜೆಯವರೆಗೂ ಮಣ್ಣು ತೆರವಿಗೆ ಸಮಯಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆ ಬಳಿಕವೇ ಜಿಲ್ಲಾಡಳಿತ ಸ್ಥಳ ಪರಿಶೀಲನೆ ಮಾಡಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದೆ.

ಶಿರಸಿಯಲ್ಲಿ ಮನೆಗಳಿಗೆ ನುಗ್ಗಿದ ನೀರುಗುರುವಾರ ಮಧ್ಯಾಹ್ನದ ವೇಳೆ ಸುರಿದ ಧಾರಾಕಾರ ಮಳೆಗೆ ಶಿರಸಿ ನಗರ ಪ್ರದೇಶದ ಹಲವೆಡೆ ನೀರು ನಿಂತಿದೆ. ಇಲ್ಲಿಯ ಧುಂಡಶಿನಗರ, ಲಯನ್ಸ್ ನಗರದ ರಸ್ತೆಗಳು ಜಲಾವೃತಗೊಂಡಿವೆ. ಸಮೃದ್ಧಿ ನಗರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರಿಗೆ ಆತಂಕ ಮೂಡಿಸಿದೆ. ಮಳೆ ನೀರಿನೊಂದಿಗೆ ಹಾವುಗಳೂ ತೇಲಿ ಬಂದು ಮನೆಯೊಳಗೆ ಪ್ರವೇಶಿಸಿದ ಘಟನೆ ನಡೆದಿದೆ. ಗುರುವಾರ ಸಂಜೆಯವರೆಗೂ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿಯೇ ಇತ್ತು.