ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಂಜನಾಡಿ ಗ್ರಾಮದ ಕೊಪ್ಪಲ ಮಲಿ ಎಂಬಲ್ಲಿ ಸಂಭವಿಸಿದ ಗುಡ್ಡ ಕುಸಿತ ಸಂದರ್ಭ ಸ್ಥಳೀಯರು, ವೈದ್ಯರು ಹಾಗೂ ಇಲಾಖೆ ಸಿಬ್ಬಂದಿ ಸುಮಾರು 9 ತಾಸು ನಡೆಸಿದ ಕಾರ್ಯಾಚರಣೆ ಮಾನವೀಯ ಕಾಳಜಿಗೆ ಹಿಡಿದ ಕನ್ನಡಿಯಂತಿತ್ತು. ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ ಎಂಬುದನ್ನು ಸಾರಿ ಹೇಳಿತ್ತು. ಶುಕ್ರವಾರ ಮಧ್ಯಾಹ್ನದ ನಮಾಜ್‌ಗೂ ಹೋಗದೆ ಯುವಕರ ತಂಡ ಕಾರ್ಯಾಚರಣೆ
ನಡೆಸಿದ್ದರೆ, ಹಿರಿಯರು ಸ್ಥಳದಲ್ಲೇ ಇದ್ದು ಮಾರ್ಗದರ್ಶನ ನೀಡಿದರು. ಘಟನೆಯಲ್ಲಿ ಪ್ರೇಮಾ(58), ಮೊಮ್ಮಕ್ಕಳಾದ ಆರ್ಯನ್(2.5) ಹಾಗೂ ಆರುಶ್(1) ಹಾಗೂ ಎಂಬುವರು ಮೃತಪಟ್ಟಿದ್ದಾರೆ. ಬೆಲ್ಮ ಗ್ರಾಮದ ಕಾನಕೆರೆ ಎಂಬಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ
ಫಾತಿಮಾ ನಯೀಮಾ(9) ಮೃತಪಟ್ಟಿದ್ದಾಳೆ. ಎರಡೂ ಘಟನೆಗಳು ನಸುಕಿನ ಜಾವ 3ರಿಂದ 4 ಗಂಟೆಯ ನಡುವೆ ಸಂಭವಿಸಿದೆ.
ಕೊಪ್ಪಲ ಮಲಿ ಮನೆಯಲ್ಲಿ ಕಾಂತಪ್ಪ ಪೂಜಾರಿ, ಅವರ ಪತ್ನಿ ಪ್ರೇಮಾ, ಪುತ್ರ ಸೀತಾರಾಮ, ಅವರ ಪತ್ನಿ ಅಶ್ವಿನಿ, ಮಕ್ಕಳಾದ ಆರುಶ್ ಮತ್ತು ಆರ್ಯನ್ ಮಲಗಿದ್ದರು. ಶುಕ್ರವಾರ ನಸುಕಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಇವರ ಮನೆಯ ಹಿಂಬದಿ ಇರುವ ಗುಡ್ಡ ಕುಸಿದಿದ್ದು ಗೇರು, ಮಾವಿನ ಮರ ಸಹಿತ ಮನೆಯ ಮೇಲೆ ಬಿದ್ದಿದೆ. ಭಾರಿ ಶಬ್ದ ಕೇಳಿದ್ದರಿಂದ ಎಚ್ಚರಗೊಂಡ ಸೀತಾರಾಮ ಮನೆಯಿಂದ
ಹೊರಗೋಡಿ ಬಂದಿದ್ದಾರೆ. ಕ್ಷಣ ಮಾತ್ರದಲ್ಲಿ ಗುಡ್ಡ ಮನೆಮೇಲೆ ಬಿದ್ದು ಮನೆ ಧರಾಶಾಯಿಯಾಗಿದೆ. ಪ್ರೇಮಾ ಅವರು ಹೊರಗೆ ಬರಲು ಪ್ರಯತ್ನಿಸಿದಾಗ ಅವರ ತಲೆಗೆ ಬೀಮ್ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಕಾಂತಪ್ಪ ಪೂಜಾರಿಯ ಕಾಲುಗಳ ಮೇಲೆ ಆರ್‌ಸಿಸಿ ಸ್ಲ್ಯಾಬ್ ಬಿದ್ದು ಮೇಲಕ್ಕೇಳಲಾಗದ ಸ್ಥಿತಿಯಲ್ಲಿತ್ತು. ಅಶ್ವಿನಿ ಮತ್ತು ಮತ್ತೊಂದು ಮಗು ಜೀವಂತವಾಗಿದ್ದರು. ಸ್ಥಳಕ್ಕೆ
ಬಂದವರು ಕಾರ್ಯಾಚರಣೆ ನಡೆಸಿ ಕಾಂತಪ್ಪ ಅವರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಘಟನೆ ನಡೆದಾಗ ಮೊದಲಾಗಿ ಆಗಮಿಸಿದ್ದು ಮಸೀದಿಯಲ್ಲಿದ್ದವರು ಮಾತ್ರವಲ್ಲದೆ ಸ್ಥಳೀಯರು ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆಯಲ್ಲಿ ನಿರಂತರ ಕೈಜೋಡಿಸಿದರು. ಈ ಪ್ರದೇಶದಲ್ಲಿ ಕೆಲ ಸಮಯಗಳ ಹಿಂದೆ ಮನೆಯ ಮೇಲ್ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಈ ಸಂದರ್ಭ ಮರಗಳನ್ನು ಕಡಿಯಲಾಗಿದೆ. ಅಲ್ಲದೆ ಜೆಸಿಬಿ, ಭಾರಿ ವಾಹನಗಳ ಓಡಾಟ ಗುಡ್ಡ ಕುಸಿಯಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಸಂತೋಷ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಎಸಿ ಹರ್ಷವರ್ಧನ್, ತಹಸೀಲ್ದಾರ್ ಪುಟ್ಟರಾಜು ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಜೆಸಿಬಿ, ಕ್ರೇನ್ ಬರಲಿಲ್ಲ
ಇಂಥ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಕಾರ್ಯಾಚರಣೆ ನಡೆಸಲು ಜೆಸಿಬಿ, ಕ್ರೇನ್ ತರಲು ಸಾಧ್ಯವಾಗಿಲ್ಲ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ 7.30ರ ವೇಳೆಗೆ ಬಂದಿದ್ದು ಅವರ ಬಳಿ ಅಗತ್ಯ ವಸ್ತುಗಳೂ ಇರಲಿಲ್ಲ. ಬಳಿಕ ಸಂದರ್ಭಕ್ಕೆ ಅನುಗುಣವಾಗಿ ಸ್ಥಳೀಯರು ಅಗತ್ಯ ವಸ್ತುಗಳನ್ನು ತಂದು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಮೃತದೇಹ ಮತ್ತು ಜೀವಂತ ಇದ್ದ ತಾಯಿ, ಮಗುವನ್ನು ಕೊಂಡೊಯ್ಯುವ ಸಂದರ್ಭ ಒದ್ದೆಯಾಗದಂತೆ ತಡೆಯುವ ವ್ಯವಸ್ಥೆಯೂ ಇರಲಿಲ್ಲ. ಕಾರ್ಯಾಚರಣೆಯ ನಡುವೆ ಆಗಾಗ್ಗೆ ಧಾರಾಕಾರ ಮಳೆಯೂ ಸುರಿಯುತ್ತಿತ್ತು.
ತೀರಾ ಇಕ್ಕಟ್ಟಿನ ಸ್ಥಳದಲ್ಲಿ ಕಾರ್ಯಾಚರಣೆ ದುಸ್ತರ
ಘಟನೆ ನಡೆದ ಮನೆ ತೋಟದ ನಡುವೆ ಇದ್ದು, ಸುತ್ತಲಿನ ಪ್ರದೇಶ ಕಾಡಿನಿಂದ ಆವೃತ್ತವಾಗಿದೆ. ದೂರದಲ್ಲಿ ಅವರ ಸಂಬಂಧಿಯ ಮನೆಯೊಂದಿದೆ. ಇತರ ಮನೆಗಳೂ ತುಂಬಾ ದೂರದಲ್ಲಿವೆ. ಮೊಂಟೆಪದವು ಮುಖ್ಯರಸ್ತೆಯಿಂದ ಮನೆಗೆ ಒಂದೂವರೆ ಕಿ.ಮೀ. ದೂರವಿದೆ. ಇಲ್ಲಿರುವ ಕಾಂಕ್ರೀಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಕಷ್ಟ. ಅಲ್ಲದೆ ಈ ರಸ್ತೆಯಲ್ಲಿ ಹೋದರೂ ಮನೆಗೆ ತಲುಪಲು ನಡೆದುಕೊಂಡೇ ಹೋಗಬೇಕಿದೆ. ಇನ್ನೊಂದು ರಸ್ತೆ ಉರುಮಣೆ ಮುಖ್ಯರಸ್ತೆಗೆ ಸಂಪರ್ಕದಲ್ಲಿದೆ. ಆದರೆ ನಡುವೆ ಗದ್ದೆಗಳಲ್ಲಿರುವ ಕಾಲುದಾರಿಯ ಮೂಲಕ ಸಾಗಬೇಕಿದ್ದು, ಮನೆಯೆದುರಲ್ಲಿ ದೊಡ್ಡದೊಂದು ನಾಲೆಯೂ ಇದೆ.
ವೈದ್ಯಕೀಯ ಕಾಲೇಜಿನ ವೈದ್ಯರ ಶ್ರಮ
ಘಟನೆಯ ಬಗ್ಗೆ ಮಾಹಿತಿ ಪಡೆದು ದೇರಳಕಟ್ಟೆ ಆಸುಪಾಸಿನ ಮೂರೂ ವೈದ್ಯಕೀಯ ಆಸ್ಪತ್ರೆಗಳ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿತ್ತು. ಡಾ.ವಿಕ್ರಂ ಶೆಟ್ಟಿ ಅವಶೇಷಗಳ ಒಳಗೆ ಹೋಗಿ ಮಗು ಮತ್ತು ಅಶ್ವಿನಿಯವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಲ್ಲದೆ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ತಾಯಿ ಮತ್ತು ಮಗುವನ್ನು ಅವಶೇಷಗಳಿಂದ ಹೊರಕ್ಕೆ ತೆಗೆಯುವವರೆಗೂ ಜೀವಂತವಾಗಿಡಲು ಸಾಧ್ಯವಾಗಿತ್ತು. ವೈದ್ಯರ ತಂಡ ಸಲ್ಲಿಸಿದ ಸೇವೆ ಶ್ಲಾಘನೆಗೆ ಪಾತ್ರವಾಗಿದೆ. ಶುಕ್ರವಾರ ಬೆಳಗ್ಗೆ ಘಟನೆ ನಡೆದಾಗ ಮೊದಲಾಗಿ ಆಗಮಿಸಿದ್ದು ಮಸೀದಿಯಲ್ಲಿದ್ದವರು. ಮಾತ್ರವಲ್ಲದೆ ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆಯಲ್ಲಿ ನಿರಂತರ ಕೈಜೋಡಿಸಿದ್ದರು. ಶುಕ್ರವಾರ ಮಧ್ಯಾಹ್ನದ ನಮಾಝ್‌ಗೂ ಹೋಗದೆ ಯುವಕರ ತಂಡ ಕಾರ್ಯಾಚರಣೆ ನಡೆಸಿದ್ದರೆ ಹಿರಿಯರು ಸ್ಥಳದಲ್ಲೇ ಇದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದರು.
ಮಸೀದಿ ಧರ್ಮಗುರುವೂ ಬಂದರು !
ಬೆಳಗ್ಗಿನ ನಮಾಜ್‌ಗೆಂದು ಎದ್ದಾಗ ಘಟನೆಯ ಬಗ್ಗೆ ಮಾಹಿತಿ ಲಭಿಸಿತು. ಜನರನ್ನು ಕರೆದೊಯ್ಯಲೆಂದು ತಕ್ಷಣ ಮೊಂಟೆಪದವು ಮಸೀದಿಗೆ ಹೋದಾಗ ಜಮೀರ್ ಮಾತ್ರ ಇದ್ದು ಅವರೊಂದಿಗೆ ಸ್ಥಳಕ್ಕೆ ಹೋದೆ. ಬಳಿಕ ಸ್ಥಳೀಯ ಮಸೀದಿಗೆ ಮಾಹಿತಿ ನೀಡಿದಾಗ ಧರ್ಮಗುರುವಿನ ಸಹಿತ ಮಸೀದಿಯಲ್ಲಿದ್ದ ಎಲ್ಲರೂ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಕಾಂತಪ್ಪ ಪೂಜಾರಿ ಅವರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದೆವು. ಮಂಜನಾಡಿ ಗ್ರಾಮದಲ್ಲಿ 16 ಸಾವಿರ ಜನರಿದ್ದು, ಇಲ್ಲಿ ಇದುವರೆಗೆ ಕೋಮು ಸಂಬಂಧಿತ ಗಲಾಟೆ ನಡೆದಿಲ್ಲ. ಇನ್ನೂ ನಡೆಯದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಎಸ್.ಕರೀಂ ತಿಳಿಸಿದ್ದಾರೆ.
ನೂರು ವರ್ಷದಿಂದ ವಾಸ
ಕಾಂತಪ್ಪ ಪೂಜಾರಿ ಕುಟುಂಬ ಇದೇ ಜಾಗದಲ್ಲಿ ವಾಸವಿದ್ದು ನೂರು ವರ್ಷವಾಗಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತೋಟದ ನಡುವಿರುವ ಮನೆಯ ಹಿಂಭಾಗದಲ್ಲಿ ಸುಮಾರು 40 ಅಡಿಯಷ್ಟು ಎತ್ತರದ ಗುಡ್ಡವಿದ್ದು, ಅದರಲ್ಲಿ ಸಾಕಷ್ಟು ಮರಗಳೂ ಇವೆ. ಆದರೆ ಈವರೆಗೂ ಯಾವುದೇ ರೀತಿಯ ಆತಂಕವಿಲ್ಲದೆ ಕುಟುಂಬಸ್ಥರು ಜೀವನ ಸಾಗಿಸಿದ್ದಾರೆ. 50 ವರ್ಷಗಳ ಹಿಂದೆ ಭಾರಿ ಮಳೆಗೆ ಮನೆಯ ಮುಂಭಾಗದಲ್ಲಿರುವ ನಾಲೆ ತುಂಬಿ ಮನೆಯಂಗಳಕ್ಕೆ ನೀರು ಬಂದಿತ್ತು. 50 ವರ್ಷಗಳ ಬಳಿಕ ದುರ್ಘಟನೆ ನಡೆದಿದೆ ಎಂದು ಸಂಬಂಧಿ ಮಾಧವ ತಿಳಿಸಿದ್ದಾರೆ.
ಕಣ್ಣೀರು ಹಾಕಿದ ಆಸಿಫ್!
ಘಟನೆ ನಡೆದ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದ ಮಂಜನಾಡಿ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಕಾರ್ಯಾಚರಣೆಯ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿ, ತಾಯಿ ಮಗುವಿನ ಪರಿಸ್ಥಿತಿಯ ಬಗ್ಗೆ ಹೇಳಿ ಅತ್ತುಬಿಟ್ಟರು. ಎನ್.ಎಸ್.ಕರೀಂ ಅವರು ಕರೆ ಮಾಡಿದ ಬಳಿಕ 30ರಷ್ಟು ಮಂದಿ ಸ್ಥಳಕ್ಕೆ ಬಂದೆವು. ನಾನು ಅವಶೇಷಗಳ ಒಳಗೆ ಹೋದಾಗ ಮಗು ಮತ್ತು ತಾಯಿ ಮಾತನಾಡುತ್ತಿದ್ದರು. ನಾನು ಅವರಿಗೆ ನೀರು ಕೊಟ್ಟು ನೀವೇನೂ ಹೆದರಬೇಡಿ. ಧೈರ್ಯವಾಗಿರಿ.. ನಿಮ್ಮೊಂದಿಗೆ ನಾವಿದ್ದೇವೆಂದು ಮಾತನಾಡಿಸಿ ಧೈರ್ಯ ತುಂಬಿದ್ದೆ. ಇಬ್ಬರು ಮಕ್ಕಳು ತಾಯಿಯ ಕಾಲುಗಳ ನಡುವೆ ಇದ್ದರು. ಭಾರವಾದ ಕಲ್ಲುಗಳು, ಕಪಾಟು ಇತ್ತು. ಮಕ್ಕಳನ್ನು ನೋಡಿ ತಾಯಿ ಅಳುತ್ತಿದ್ದರು. ಮಕ್ಕಳನ್ನು ಮೊದಲು ಕೊಂಡೊಯ್ಯಿರಿ, ನಂತರನಾನು ಬರುತ್ತೇನೆ ಎಂದು ಅಶ್ವಿನಿ ತಿಳಿಸಿದ್ದರು. ನಾವು ಸಾಕಷ್ಟು ಸಮಾಧಾನದ ಮಾತುಗಳನ್ನಾಡಿ ಬಂದೆವು. ಆ ಸಂದರ್ಭ ಅವರನ್ನು ಹೊರಕ್ಕೆ ತರಲು ತುಂಬಾ ಪ್ರಯತ್ನಪಟ್ಟೆವು. ಆದರೆ ತಾಯಿಯ ಸೊಂಟದ ಕೆಳಗಡೆ ಸ್ಲ್ಯಾಬ್ ಬಿದ್ದಿತ್ತು. ಒಂದು ಮಗು ನನ್ನ ಬಳಿ ಮಾತನಾಡಿದ್ದರೆ, ಒಂದು ಮಗು ಮೃತಪಟ್ಟಿತ್ತು. ಒಳಭಾಗಕ್ಕೆ ಗಾಳಿ ಹೋಗುತ್ತಿರಲಿಲ್ಲ, ಡಾ.ವಿಕ್ರಂ ಸಹಿತ ವೈದ್ಯರ ತಂಡ ಆಕ್ಸಿಜನ್ ವ್ಯವಸ್ಥೆ ಮಾಡಿ ಸಾಕಷ್ಟು ಪರಿಶ್ರಮಪಟ್ಟಿದೆ ಎಂದು ಅತ್ತುಬಿಟ್ಟರು.
ಬದುಕಿಸಬೇಕೆಂದು ತುಂಬ ಕಷ್ಟಪಟ್ಟೆವು
ಎ.ಸಿ.ಯವರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದಾಗ ಐದು ಗಂಟೆಯಾಗಿತ್ತು, ಆಗ ಬಂದಾಗ ನಾಲ್ಕೈದು ಮಂದಿ ಗೋಡೆ ಒಡೆಯುತ್ತಿದ್ದರು. ನಾವೂ ಅವರೊಂದಿಗೆ ಸೇರಿಕೊಂಡು ಕಾಂತಪ್ಪ ಪೂಜಾರಿ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದೆವು. ಎನ್.ಎಸ್.ಕರೀಂ, ಪಂಚಾಯಿತಿ ಸದಸ್ಯ ಆಸಿಫ್ ಕಾರ್ಯಾಚರಣೆಯಲ್ಲಿದ್ದರು. ಆಸಿಫ್ ಅವರು ಮಹಿಳೆ ಬಳಿ ಮಾತನಾಡುತ್ತಾ ಧೈರ್ಯ ತುಂಬುತ್ತಿದ್ದರು ಎಂದು ಗ್ರಾಮ ಸಹಾಯಕ ಮೈಕಲ್ ಡಿಸೋಜ ತಿಳಿಸಿದರು. ಎಲ್ಲರನ್ನೂ ಬದುಕಿಸಬೇಕೆಂದು ಬೆಳಗ್ಗೆಯಿಂದಲೂ ತುಂಬಾ ಕಷ್ಟಪಟ್ಟೆವು. ನಮಗಿಲ್ಲಿ ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಸ್ಥಳೀಯ ಇಬ್ರಾಹಿಂ ಎರ್ಮಾಡಿ ತಿಳಿಸಿದರು.