ಜಿಲ್ಲೆ

ಗೊಂದಲ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ

ಶಿವಮೊಗ್ಗ: ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವ ಹೋರಾಟದ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.

ಶಿಕಾರಿಪುರದಲ್ಲಿ ಗುರುವಾರ ಎಸ್ಟಿ ಮೀಸಲಾತಿ ಹೋರಾಟ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಗೊಮ್ಮೆ ಈಗೊಮ್ಮೆ ಎಸ್ಟಿ ಮೀಸಲಾತಿ ಹೋರಾಟಕ್ಕೆ ತನ್ನನ್ನು ಕರೆಯಲಿಲ್ಲ ಎನ್ನುತ್ತಿದ್ದಾರೆ. ಆರ್​ಎಸ್​ಎಸ್ ಹೋರಾಟದ ಹಿಂದಿದೆ ಎಂದು ಆಪಾದಿಸುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಹೋರಾಟದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಈಗಾಗಲೇ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ದೆಹಲಿಗೆ ಹೋಗಿಬಂದಿದ್ದೇವೆ. ಕೇಂದ್ರ ಬುಡಕಟ್ಟು ಸಚಿವೆ ರೇಣುಕಾ ಸಿಂಗ್ ಸಹಿತ ಸಂಬಂಧಿಸಿದವರನ್ನು ಭೇಟಿ ಮಾಡಿದ್ದೇವೆ. ಪಾದಯಾತ್ರೆ ಆರಂಭವಾದರೆ ಸಿದ್ದರಾಮಯ್ಯ ಸೇರಿ ರಾಜ್ಯದ 60 ಲಕ್ಷ ಜನ ಬರಲಿದ್ದಾರೆ. ಕಟ್ಟಕಡೆಯ ಕುರುಬನ ಏಳಿಗೆಗೆ ಹೋರಾಟ ಮಾಡುತ್ತಿದ್ದು ಫೆ.7ರಂದು 10 ಲಕ್ಷ ಕುರುಬರು ಸೇರಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಆರ್​ಎಸ್​ಎಸ್ ಮುಖಂಡ ಬಿ.ಎಲ್.ಸಂತೋಷ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಣ್ಣು ತೆರೆಸುತ್ತೇವೆ ಎಂದು ತಿಳಿಸಿದರು.