ಜಿಲ್ಲೆ

ಹಿಜಾಬ್ ಧರಿಸಿ ಬಂದ 4 ಕಾಲೇಜು ವಿದ್ಯಾರ್ಥಿನಿಯರು ಮನೆಗೆ

Dakshina Kannada

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬುಧವಾರ ಆರು ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಪೈಕಿ ನಾಲ್ಕು ಕಾಲೇಜುಗಳ 49 ವಿದ್ಯಾರ್ಥಿನಿಯರು ಹಿಂತಿರುಗಿ ಮನೆಗೆ ತೆರಳಿದ್ದಾರೆ.

ಮಂಗಳೂರು ಕಾರ್‌ಸ್ಟ್ರೀಟ್‌ನ ದಯಾನಂದ ಪೈ ಪದವಿ ಕಾಲೇಜಿನ ಇಬ್ಬರು, ಮುಡಿಪು ಪದವಿ ಕಾಲೇಜಿನ 22, ಮೊಂಟೆಪದವು ಕಾಲೇಜಿನ 11, ಪೊಂಪೈ ಕಾಲೇಜಿನ 26, ಇಂದಿರಾ ನಗರ ಪದವಿ ಕಾಲೇಜಿನ 15 ಹಾಗು ಮೂಡುಬಿದಿರೆ ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಮುಡಿಪು ಪದವಿ ಕಾಲೇಜು ಹಾಗು ಮೊಂಟೆಪದವು ಕಾಲೇಜಿನ ವಿದ್ಯಾರ್ಥಿನಿಯರು ಆಡಳಿತ ಮಂಡಳಿ ಹಾಗು ಪ್ರಾಂಶುಪಾಲರ ಸೂಚನೆ ಮೇರೆಗೆ ಹಿಜಾಬ್ ತೆಗೆದು ತರಗತಿಗೆ ಹಾಜರಾದರು. ಉಳಿದ ಕಾಲೇಜುಗಳ ವಿದ್ಯಾರ್ಥಿನಿಯರು ಹಿಂತಿರುಗಿ ಮನೆಗೆ ತೆರಳಿದ್ದಾರೆ.

ಎಲ್ಲ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಶಾಂತಿಯುತವಾಗಿ ಪ್ರಕರಣ ಇತ್ಯರ್ಥಪಡಿಸಲು ಕ್ರಮ ವಹಿಸಿದೆ. ಯಾವುದೇ ಗೊಂದಲಗಳು ಉಂಟಾಗಿಲ್ಲ. ಹಿಜಾಬ್ ಧರಿಸಿ ಬಂದ ಎಲ್ಲ ಕಾಲೇಜುಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿದ್ದಾರೆ.