ಜಿಲ್ಲೆ

ಮೂರನೇ ದಿನಕ್ಕೆ ಕಾಲಿಟ್ಟ ಹಿಜಾಬ್ ವಿವಾದ

ಕುಂದಾಪುರ: ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಕೂಡ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಕಾರಣ ಪ್ರವೇಶ ನಿರಾಕರಿಸಲಾಯಿತು.

ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ ಎಂದು ಪ್ರಾಂಶುಪಾಲರು ಸೂಚಿಸಿದ ಹೊರತಾಗಿಯೂ ವಿದ್ಯಾರ್ಥಿಗಳು ಗೇಟ್ ತಳ್ಳಿ ಒಳಕ್ಕೆ ಪ್ರವೇಶಿಸಿ ಕಾಲೇಜು ಆವರಣದಲ್ಲಿ ಇರಲು ಅವಕಾಶ ನೀಡುವಂತೆ ಆಗ್ರಹಿಸಿದರು. ಜತೆಗೆ ಕಾಲೇಜು ಆಡಳಿತದ ವಿರುದ್ಧ ಪಾಲಕರು ಆಕ್ಷೇಪ ವ್ಯಕ್ತಪಡಿಸಿ ಕಾಲೇಜು ಗೇಟ್‌ನ ಹೊರಭಾಗದಲ್ಲಿ ನಿಂತು ಪ್ರತಿಭಟಿಸಿದರು. ಬಳಿಕ ಕುಂದಾಪುರ ಡಿವೈಎಸ್‌ಪಿ ಆಗಮಿಸಿ ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದಾಗ ಮಾತಿನ ಚಕಮಕಿ ನಡೆಯಿತು.

ಹಿಜಾಬ್‌ಗೆ ಕೇಸರಿ ಶಾಲು ಸೆಡ್ಡು

ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಓಡಾಡಲು ಆರಂಭಿಸಿದರು. ಅವರನ್ನೂ ಹೊರಕ್ಕೆ ಕಳುಹಿಸುವಂತೆ ಮುಸ್ಲಿಂ ವಿದ್ಯಾರ್ಥಿನಿಯರ ಪಾಲಕರು ಒತ್ತಾಯಿಸಿದರು. ಬಳಿಕ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಯಿತು.

ಬಿಗುವಿನ ವಾತಾವರಣ

ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈ ಶ್ರೀರಾಮ ಘೋಷಣೆ ಕೂಗುತ್ತಾ ಹೊರಬರುತ್ತಿದ್ದಂತೆ ಗೇಟಿನ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಿಂದು ಸಂಘಟನೆ ಹಾಗೂ ಮುಸ್ಲಿಂ ಸಂಘಟನೆಯ ಮುಖಂಡರು ಪರಸ್ಪರ ವಿದ್ಯಾರ್ಥಿಗಳ ಪರ ಮಾತಿಗೆ ಮುಂದಾದರು. ಪೊಲೀಸರ ಮುಂದೆ ತಮ್ಮ ಅಹವಾಲು ಹೇಳಿಕೊಂಡರೂ ಸರ್ಕಾರದ ಆದೇಶ ಪಾಲನೆ ಅಗತ್ಯ ಎಂದು ಪೊಲೀಸರು ಎಲ್ಲರನ್ನೂ ಚದುರಿಸಿದರು. ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ಮತ್ತೆ ತರಗತಿ ಒಳಗೆ ಪ್ರವೇಶಿಸಿದರೂ, ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆಯಲು ಒಪ್ಪದೆ ಮತ್ತೆ ಗೇಟಿನ ಬಳಿ ನಿಂತರು.