ಜಿಲ್ಲೆ

ವೇತನಕ್ಕಾಗಿ ಹೆದ್ದಾರಿ ಕಾರ್ಮಿಕರ ಮುಷ್ಕರ

Avinash R

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ ಮೂರು ತಿಂಗಳ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನೌಕರರು ಮುಷ್ಕರ ನಡೆಸಿದ ಘಟನೆ ಸೋಮವಾರ ನಡೆದಿದೆ.

ಮಳೆಯಿಂದಾಗಿ ರಸ್ತೆ ತೀರ ಹದಗೆಟ್ಟಿದ್ದು ಮಳೆಗಾಲ ಆರಂಭದಿಂದ ಸವಾರರು ತೀರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಮಧ್ಯೆ ರಸ್ತೆ ಸರಿಪಡಿಸಲು ನೌಕರರು ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಗುತ್ತಿಗೆದಾರ ಕಂಪನಿ ವೇತನ ನೀಡಿಲ್ಲ ಎಂದು ಓಡಿಲ್ನಾಳದಲ್ಲಿರುವ ಕಂಪನಿ ಯುನಿಟ್‌ನಲ್ಲಿ ಮುಷ್ಕರ ಮಾಡಿದ್ದಾರೆ.ಒಬ್ಬೊಬ್ಬರಿಗೆ 35ರಿಂದ 60 ಸಾವಿರ ರೂ. ವರೆಗೆ ವೇತನಿವಿದ್ದು, ಒಬ್ಬರಿಗೂ ಈವರೆಗೆ ವೇತನ ಕೈಸೇರಿಲ್ಲ. ಹೆಂಡತಿ ಮಕ್ಕಳು ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ, ಊಟಕ್ಕೆ ಬೇಕಾದ ಆಹಾರ ಸಾಮಗ್ರಿಯಿಲ್ಲ, ಒತ್ತಡದಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಮ್ಮ ಕುಟುಂಬವನ್ನು ಬದುಕಿಸಿ. ಊರಿಗೆ ಹೋಗದೆ ತಿಂಗಳುಗಳಾಗಿವೆ. ನಮ್ಮದು ಗುತ್ತಿಗೆದಾರರ ವಿರುದ್ಧ ಹೋರಾಟವಲ್ಲ, ವೇತನಕ್ಕಾಗಿ ನಮ್ಮ ಬೇಡಿಕೆಯಷ್ಟೆ. ನಮಗೆ ವೇತನ ನೀಡದಿದ್ದರೆ ನಾವು ಕೆಲಸಕ್ಕೆ ಬರುವುದಿಲ್ಲ. ಮುಷ್ಕರ ನಡೆಸಿಯೇ ಸಿದ್ಧ. ವೇತನ ನೀಡಿ ಇಲ್ಲವೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿ ಕಂಪನಿ ಎದುರು ಧರಣಿ ಮಾಡಿದ್ದಾರೆ.